ಸಿದ್ದು ಹೆಸರಲ್ಲಿ ಪತ್ರ: ಡಿಕೆಶಿವಕುಮಾರ್ ಕಿಡಿ

ಬೆಂಗಳೂರು, ಮೇ ೯-ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಸಿದ್ದರಾಮಯ್ಯ ಅವರ ಹೆಸರಲ್ಲಿ ನನ್ನ ವಿರುದ್ಧ ಪತ್ರ ಬರೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಇಂದು ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನನ್ನ ವಿರುದ್ಧ ಯಾಕೆ ಪತ್ರ ಬರೆಯುತ್ತಾರೆ? ಅವರು ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಮೊನ್ನೆಯಷ್ಟೇ ನಾವಿಬ್ಬರೂ ಸೇರಿ ಅಭಿಪ್ರಾಯ ಹಂಚಿಕೊಂಡಿದ್ದೇವೆ. ಈಗಲೂ ನಾವು ಮಾಡುತ್ತಿದ್ದೇವೆ. ಅವರಿಗೆ ಜನರ ಬಳಿ ಪ್ರಚಾರಕ್ಕೆ ಸಮಯ ಸಿಗುತ್ತಿಲ್ಲ. ಇನ್ನು ಈ ರೀತಿ ದೂರಲು ಎಲ್ಲಿ ಸಾಧ್ಯ? ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ. ಹೀಗಾಗಿ ಅವರ ಹೆಸರಲ್ಲಿ ನಕಲಿ ಪತ್ರ ಬರೆದು ಹಂಚುತ್ತಿದ್ದಾರೆ. ಬಿಜೆಪಿಯಲ್ಲಿರುವ ಆಂತರಿಕ ಹುಳುಕು ಮುಚ್ಚಿಕೊಳ್ಳಲು ಈ ರೀತಿ ಪ್ರಯತ್ನ ಮಾಡುತ್ತಿದ್ದಾರೆ. ಮೋದಿ ಅವರು ಬಂದು ಬೀದಿ ಬೀದಿ ಅಲೆದಾಡಿದರು. ರೋಡ್ ಶೋ ಮಾಡಿದರು. ಅವರ ಜತೆ ಒಬ್ಬ ರಾಜ್ಯ ನಾಯಕನೂ ಇರಲಿಲ್ಲ ಎಂದು ಲೇವಡಿ ಮಾಡಿದರು.
ನೂತನ ಸಂಸತ್ ಭವನಕ್ಕೂ ಒಬ್ಬರೇ ಹೋಗುತ್ತಾರೆ. ರಾಮಮಂದಿರ ಪೂಜೆಗೂ ಒಬ್ಬರೇ ಕೂರುತ್ತಾರೆ. ಮತ ಕೇಳುವಾಗಲೂ ಒಬ್ಬರೇ ಹೋಗುತ್ತಾರೆ. ನಾಯಕನಾದವ ನಾಯಕರನ್ನು ಸೃಷ್ಟಿ ಮಾಡಬೇಕು. ಈ ಸಮಯದಲ್ಲಿ ಅವರ ನಾಯಕರ ಶಕ್ತಿಯನ್ನು ಅವರೇ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ಇದು ಅಚ್ಚರಿ ತಂದಿದೆ ಎಂದರು.
ಸೋಲುವ ಭೀತಿಯಿಂದ ಇಷ್ಟು ಅಬ್ಬರದ ಪ್ರಚಾರ ಮಾಡಿದ್ದಾರೆ. ಇವರು ಎಷ್ಟೇ ಅಬ್ಬರದ ಪ್ರಚಾರ ಮಾಡಿದರೂ ರಾಜ್ಯದ ಜನ ಕೇಳುವುದಿಲ್ಲ. ಜನರಿಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಹಾಗೂ ದಕ್ಷ ಆಡಳಿತ, ರಾಜ್ಯದ ಅಭಿವೃದ್ಧಿ ಬೇಕಾಗಿದೆಎಂದು ತಿಳಿಸಿದರು.
ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಟೀಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾವು ಎನ್‌ಇಪಿ ರದ್ದು ಸೇರಿದಂತೆ ನಮ್ಮ ಪ್ರಣಾಳಿಕೆಯ ಎಲ್ಲಾ ಅಂಶಗಳಿಗೆ ಬದ್ಧರಾಗಿದ್ದೇವೆ. ನಮ್ಮದು ನಾಗ್ಪುರ ಶಿಕ್ಷಣ ನೀತಿ ಅಲ್ಲ, ನಮಗೆ ರಾಜ್ಯ ಶಿಕ್ಷಣ ನೀತಿ ಬೇಕು. ನಮ್ಮ ರಾಜ್ಯದ ಶಿಕ್ಷಣ ನೀತಿಯಲ್ಲಿ ಇಷ್ಟು ದಿನ ಕಲಿತು ದೊಡ್ಡ ಸಾಧನೆ ಮಾಡಿಲ್ಲವೇ?’ ಎಂದು ತಿರುಗೇಟು ನೀಡಿದರು.