ಸಿದ್ದು, ಹೆಚ್‌ಡಿಕೆ, ಡಿಕೆಶಿ, ಸತ್ಯಹರಿಶ್ಚಂದ್ರರಾ

ಬೆಂಗಳೂರು, ಮಾ. ೨೪- ಸಚಿವರುಗಳು ಹಾಗೂ ರಾಜ್ಯ ವಿಧಾನಸಭೆಯ ೨೨೪ ಶಾಸಕರು ಹೊಂದಿರುವ ಅನೈತಿಕ ಸಂಬಂಧದ ಬಗ್ಗೆ ತನಿಖೆ ಆಗಲಿ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ರವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಯಾವ್ಯಾವ ನಾಯಕರು ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬುದು ತನಿಖೆಯಿಂದ ಬಹಿರಂಗವಾಗಲಿ ಎಂದು ಸವಾಲಿನ ದಾಟಿಯಲ್ಲಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ. ಕುಮಾರ್‌ಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ವಿಧಾನ ಸಭಾಧ್ಯಕ್ಷ ರಮೇಶ್‌ಕುಮಾರ್ ರವರುಗಳು ಸತ್ಯಹರಿಶ್ಚಂದ್ರರಾ? ಇವರೆಲ್ಲಾ ಏಕಪತ್ನಿ ವ್ರತಸ್ಥರಾ ಸಮಾಜಕ್ಕೆ ಮಾದರಿಯಾಗಿದ್ದಾರಾ? ಎಂದವರು ವ್ಯಂಗ್ಯವಾಡಿದ್ದಾರೆ.
ತೇಜೋವಧೆ ವರದಿಗಳನ್ನು ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆತಂದಿರುವ ೬ ಮಂದಿ ಸಚಿವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳ ನಾಯಕರು ಆಗ್ರಹಪಡಿಸುತ್ತಿರುವ ವಿರುದ್ಧ ತಿರುಗಿಬಿದ್ದಿರುವ ಡಾ. ಸುಧಾಕರ್‌ರವರ ಹೇಳಿಕೆ ವಿವಾದಕ್ಕೆ ಎಡೆಮಾಡಿದೆ.
ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ೨೨೫ ಶಾಸಕರು, ಸಚಿವರು ಎಲ್ಲರ ಬಗ್ಗೆಯೂ ತನಿಖೆಯಾಗಲಿ. ಯಾರಿಗೆ ಅನೈತಿಕ ಸಂಬಂಧ ಇದೆ, ಯಾರಿಗೆ ಇಲ್ಲ ಎಂಬುದು ತನಿಖೆಯಿಂದ ಬಯಲಾಗಲಿ. ಜನರಿಗೂ ಎಲ್ಲರ ಬಂಡವಾಳ ತಿಳಿಯಲಿ. ಇದು ನನ್ನ ಬಹಿರಂಗ ಸವಾಲು ಎಂದರು.
ಮರ್ಯಾದಾ ಪುರುಷೋತ್ತಮರಂತೆ, ಶ್ರೀರಾಮಚಂದ್ರರಂತೆ ಮಾತನಾಡುತ್ತಾ ಏಕಪತ್ನಿ ವ್ರತವನ್ನು ಪಾಲನೆ ಮಾಡುತ್ತಿರುವಂತೆ ತಾವು ಮಾದರಿ ಎಂದೆಲ್ಲಾ ಹೇಳಿಕೊಳ್ಳುವ ನಾಯಕರುಗಳ ವಿವಾಹೇತರ ಸಂಬಂಧಗಳ ಬಗ್ಗೆಯೂ ತನಿಖೆಯಾಗಬೇಕು. ಎಲ್ಲರ ಬಂಡವಾಳವೂ ಬಯಲಾಗಬೇಕು ಎಂದರು.
ತಮ್ಮ ರಾಜೀನಾಮೆ ಕೇಳುತ್ತಿರುವ ಪ್ರತಿಪಕ್ಷ ನಾಯಕರುಗಳು ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡಿದರೂ, ವೈಯುಕ್ತಿಕ ಜೀವನದಲ್ಲಿ ಏನು ಮಾಡಿದ್ದಾರೆ. ಅವರದ್ದು ಏನೇನು ಇದೆ. ಎಲ್ಲವೂ ಗೊತ್ತಾಗಬೇಕಿದೆ. ತನಿಖೆಯಾದರೆ ಮಾತ್ರ ಎಲ್ಲವೂ ಬಯಲಾಗುತ್ತದೆ ಎಂದರು.
ನೈತಿಕತೆ ಮೌಲ್ಯದ ಬಗ್ಗೆ ಎಲ್ಲಾ ಕಾಂಗ್ರೆಸ್-ಜೆಡಿಎಸ್ ನಾಯಕರು ಮಾತನಾಡುತ್ತಿದ್ದಾರೆ. ಎಲ್ಲದ್ದರ ಬಗ್ಗೆಯೂ ತನಿಖೆಯಾಗಲಿ, ಯಾರು ನೈತಿಕತೆಯಿಂದ ಇದ್ದಾರೆ. ಯಾರೂ ಅನೈತಿಕತೆಯಿಂದ ಇದ್ದಾರೆ ಗೊತ್ತಾಗುತ್ತದೆ ಎಂದು ಸುಧಾಕರ್ ಹೇಳಿದರು. ತಮ್ಮ ವಿರುದ್ಧ ಮಾತನಾಡುತ್ತಿರುವ ನಾಯಕರುಗಳಿಗೆ ನಾನು ಬಹಿರಂಗ ಸವಾಲು ಹಾಕಿದ್ದೇನೆ. ತನಿಖೆಗೆ ಒಪ್ಪಲಿ ಎಂದು ಅವರು ಹೇಳಿದರು.
ಕೊರತೆ ಇಲ್ಲ
ರಾಜ್ಯದಲ್ಲಿ ಕೊರೊನಾ ಲಸಿಕೆಯ ಕೊರತೆ ಇಲ್ಲ. ಸಾಕಷ್ಟು ದಾಸ್ತಾನಿದೆ. ಕೇಂದ್ರ ಸರ್ಕಾರದ ಆರೋಗ್ಯ ಸಚಿವರು, ಆರೋಗ್ಯ ಕಾರ್ಯದರ್ಶಿಗಳ ಜತೆಯೂ ಮಾತನಾಡಿದ್ದೇನೆ. ಇಂದು ಹೆಚ್ಚುವರಿಯಾಗಿ ೪ ಲಕ್ಷ ಡೋಸ್ ಕೊರೊನಾ ಸಲಿಕೆ ರಾಜ್ಯಕ್ಕೆ ಬರಲಿದ. ಇದರ ಜತೆಗೆ ೧೨.೫ ಲಕ್ಷ ಡೋಸ್ ಲಸಿಕೆಯೂ ಕೇಂದ್ರದಿಂದ ಸಿಗಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಕ್ಷಯಮುಕ್ತ ರಾಜ್ಯ
ಇಂದು ವಿಶ್ವ ಕ್ಷಯರೋಗ ದಿನಾಚರಣೆಯಾಗಿದ್ದು, ೨೦೨೫ರ ವೇಳೆಗೆ ರಾಜ್ಯವನ್ನು ಕ್ಷಯಮುಕ್ತ ರಾಜ್ಯವ್ನಾಗಿಸುವ ಗುರಿ ಹೊಂದಿದ್ದೇವೆ. ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.