ಸಿದ್ದು ಹುಟ್ಟೂರಿನಲ್ಲಿ ರಾಮಮಂದಿರ ನಿರ್ಮಾಣ; ನಾಳೆ ಲೋಕಾರ್ಪಣೆ

ಮೈಸೂರು, ಏ.೧೮: ಅಯೋಧ್ಯೆಗೂ ಮುನ್ನ ಮಾಜಿ ಸಿಎ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನವರ ಹುಟ್ಟೂರಾದ ಮೈಸೂರು ತಾಲ್ಲೂಕಿನ ಸಿದ್ದರಾಮನ ಹುಂಡಿಯಲ್ಲಿ ರಾಮ ಮಂದಿರ ತಲೆಎತ್ತಿದೆ.
ಸಿದ್ದರಾಮಯ್ಯ ಹೇಳಿದಂತೆ ಸಿದ್ದರಾಮನ ಹುಂಡಿಯಲ್ಲಿ ರಾಮಮಂದಿರ ನಿರ್ಮಾಣವಾಗಿದ್ದು, ಸಿದ್ದರಾಮಯ್ಯ ಅವರೇ ಖುದ್ದಾಗಿ ನಿಂತು ನಾಳೆ ದೇವಸ್ಥಾನ ಲೋಕಾರ್ಪಣೆ ಮಾಡಲಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಇನ್ನೂ ದೇಣಿಗೆ ಸಂಗ್ರಹ ಮಾಡುತ್ತಿದೆ. ಆದರೆ, ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಹಣ ನೀಡದೆ ಸಿದ್ದರಾಮಯ್ಯ, ನಮ್ಮೂರಿನಲ್ಲೇ ರಾಮ ಮಂದಿರ ಕಟ್ಟಿಸುತ್ತೇನೆಂದು ಬಿಜೆಪಿಗೆ ಟಾಂಗ್ ನೀಡಿದ್ದರು. ಅವರು ಹೇಳಿದಂತೆ ಅವರ ಹುಟ್ಟುರಾದ ಸಿದ್ದರಾಮನಹುಂಡಿಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಮುಂದಾಳತ್ವದಲ್ಲಿ ಈ
ರಾಮ ಮಂದಿರ ತಲೆ ಎತ್ತಿದೆ. ಪಾರ್ವತಮ್ಮನವರು ಗ್ರಾಮಕ್ಕೆ ಬಂದಾಗಲೆಲ್ಲ ಈ ರಾಮನ ದೇಗುಲಕ್ಕೆ ಬರುತ್ತಿದ್ದರಂತೆ. ಶಿಥಿಲವಾದ ದೇವಾಲಯದ ಪುನರ್‌ನಿರ್ಮಾಣಕ್ಕೆ ಗ್ರಾಮಸ್ಥರು ಮನವಿ ಮಾಡಿದಾಗ ಪಾರ್ವತಿ ಸಿದ್ದರಾಮಯ್ಯನವರು ಒಪ್ಪಿಗೆ ಸೂಚಿಸಿ ನೆರವು ನೀಡಿದ್ದಾರೆ. ಅಲ್ಲದೇ, ಸ್ಥಳೀಯರು ಕೂಡ ದೇವಾಲಯದ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ.ಸುಮಾರು ೫೦ ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ದೇವಾಲಯ ನಿರ್ಮಾಣವಾಗಿದ್ದು, ಗ್ರಾಮದ ದೇಗುಲಗಳಲ್ಲೇ ಇದು ಖ್ಯಾತಿಯಾಗಿದೆ. ಕೊರೊನಾ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ತುಂಬಾ ಸರಳವಾಗಿ ದೇವಾಲಯವನ್ನ ಲೋಕಾರ್ಪಣೆ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ನಾಳೆ ಬೆಳಗ್ಗೆ ವಿವಿಧ ಪೂಜಾ ಕೈಂಕರ್ಯ, ಕಳಸ ಪ್ರತಿಷ್ಠಾಪನೆ, ಹೋಮ ಹವನಗಳು ನಡೆಯಲಿವೆ. ಬೆಳಗ್ಗೆ ೧೧ ಘಂಟೆಗೆ ಸಿದ್ದರಾಮಯ್ಯ, ಶಾಸಕ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಹೇಳಿದಂತೆ ಹುಟ್ಟೂರಿನಲ್ಲಿ ಪೂರ್ಣಗೊಂಡಿರುವ ಮಂದಿರದಲ್ಲಿ ’ರಾಮ’ ದರ್ಶನ ಆಗುತ್ತಿದೆ.