ಸಿದ್ದು ಸೋಲಿನ ವಿಶ್ಲೇಷಣೆ ಅಪಾರ್ಥ ಬೇಡ : ಪರಂ

ತುಮಕೂರು, ಡಿ. ೨೨- ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಚುನಾವಣೆಯ ಸೋಲಿನ ಕುರಿತು ಸಿದ್ದರಾಮಯ್ಯ ಅವರು ಲೋಕಾಭಿರಾಮವಾಗಿ ಮಾತನಾಡಿರುವುದನ್ನೇ ರಾಜ್ಯದ ರಾಜಕೀಯ ಚರ್ಚೆಯಂತೆ ಬಿಂಬಿಸಲು ಹೊರಟಿರುವುದು ಸರಿಯಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಸಿದ್ದರಾಮಯ್ಯ ಅವರು ಏನ್ರಯ್ಯ ನನ್ನನ್ನು ಸೋಲಿಸಿದ್ರಿ ಎಂದು ಲೋಕಾಭಿರಾಮವಾಗಿ ಹೇಳಿದ್ದಾರೆ. ಅದನ್ನೇ ಪ್ರಮುಖ ಸುದ್ದಿಯಂತೆ ಚರ್ಚಿಸುವುದು ಒಳ್ಳೆಯದಲ್ಲ ಎಂದರು.
ತುಮಕೂರಿನ ಹೊರವಲಯದ ಸಿದ್ದಾರ್ಥ ನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮಟ್ಟದಲ್ಲಿ ನಮ್ಮಂಥವರು ರಾಜಕೀಯದಲ್ಲಿ ಒಂದು ಹಂತಕ್ಕೆ ತಲುಪಿದ್ದೇವೆ. ನಮ್ಮನ್ನು ಪ್ರತಿಯೊಬ್ಬ ಜನರು ಕೂಡ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ನಾವು ಮಾತನಾಡುವಾಗ ಸಂಯಮದಿಂದ ಇರಬೇಕು. ಅದು ಮನರಂಜನೆ ಆಗಬಾರದು. ಸೋಲು-ಗೆಲುವು ಸಾಮಾನ್ಯ. ಜನರ ತೀರ್ಮಾನಕ್ಕೆ ಪ್ರತಿಯೊಬ್ಬರೂ ಬದ್ದರಾಗಿರಬೇಕು ಎಂದು ಕಿವಿಮಾತು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಬ್ಬ ಮುಖಂಡರನ್ನೇ ನಂಬಿಕೊಂಡಿದ್ದು ಸೋಲಿಗೆ ಕಾರಣ ಎಂಬುದು ಸರಿಯಲ್ಲ. ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯನ್ನು ಒಬ್ಬ ಮುಖಂಡ ಗೆಲ್ಲಿಸಲು ಸಾಧ್ಯವಿಲ್ಲ. ಅದು ಮತದಾರರ ತೀರ್ಮಾನವಾಗಿರುತ್ತದೆ. ನಾನು ಕೂಡ ಚುನಾವಣೆಯಲ್ಲಿ ಸೋತಿದ್ದೇನೆ. ಮತದಾರರ ತೀರ್ಮಾನ ಅದು. ಅದನ್ನು ಗೌರವಿಸಬೇಕು ಎಂದು ತಿಳಿಸಿದರು.
ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಕೆ.ಎನ್.ರಾಜಣ್ಣ ಸ್ನೇಹಿತರು. ಶ್ರೀನಿವಾಸ್ ಆಗಾಗ ರಾಜಣ್ಣ ಅವರ ಮನೆಗೆ ಬಂದು ಹೋಗುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅವರ ಪಕ್ಷಕ್ಕೆ ಬರುವ ಯಾವುದೇ ಚರ್ಚೆ ಅಧಿಕೃತವಾಗಿ ನಡೆದಿಲ್ಲ. ನಮ್ಮ ಮನೆಗೂ ಒಂದೆರಡು ಬಾರಿ ಬಂದು ಹೋಗಿದ್ದಾರೆ. ಹಾಗೆಂದು ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ತೀರ್ಮಾನಕ್ಕೆ ಬರುವುದಲ್ಲ. ನಮ್ಮ ಜಿಲ್ಲೆಯ ರಾಜಕೀಯ ಪರಿಸ್ಥಿತಿಯನ್ನು ನೋಡಿಕೊಂಡು ಮುಂದೆ ತೀರ್ಮಾನ ಕೈಗೊಳ್ಳಲಾಗುವುದು. ಹೈಕಮಾಂಡ್ ತೀರ್ಮಾನಕ್ಕೆ ಬದ್ದನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಬಿಜೆಪಿಯಲ್ಲಿ ವಿಲೀನವಾಗುವುದನ್ನು ಕುಮಾರಸ್ವಾಮಿಯವರೇ ನಿರಾಕರಿಸಿದ್ದಾರೆ. ಬಿಜೆಪಿಯಲ್ಲಿ ವಿಲೀನವಾಗುವುದು ಬಿಡುವುದು ಅವರ ಪಕ್ಷದ ತೀರ್ಮಾನ. ಬಿಜೆಪಿಗೆ ವಿಲೀನವಾಗುವ ಬಗ್ಗೆ ಊಹಾಪೋಹ ಎದ್ದಿವೆ. ಮಾಧ್ಯಮಗಳಲ್ಲೂ ಸುದ್ದಿ ಪ್ರಸಾರವಾಗಿದೆ. ನಾನು ಸಹ ಸುದ್ದಿಯನ್ನು ನೋಡಿದ್ದೇನೆ. ಏನೇ ತೀರ್ಮಾನ ಮಾಡಿದರೂ ಅವರಿಗೆ ಬಿಟ್ಟದ್ದು ಎಂದು ತಿಳಿಸಿದರು.
ಎತ್ತಿನಹೊಳೆ ಯೋಜನೆಯಿಂದ ಕೊರಟಗೆರೆ ರೈತರು ಭೂಮಿ ಕಳೆದುಕೊಳ್ಳುತ್ತಾರೆ. ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ನೀಡಿದಷ್ಟೇ ಪರಿಹಾವನ್ನು ಕೊರಟಗೆರೆ ರೈತರಿಗೂ ನೀಡಬೇಕು. ನಾನು ಹಿಂದಿನಿಂದಲೂ ಇದನ್ನೇ ಹೇಳುತ್ತಿದ್ದೇನೆ. ರೈತರಿಗೆ ನ್ಯಾಯ ಸಿಗಬೇಕು. ಸೂಕ್ತ ಪರಿಹಾರ ದೊರೆಯಬೇಕು. ಈ ಯೋಜನೆಯಿಂದ ಹಲವು ಹಳ್ಳಿಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಹಾಗಾಗಿ ಭೂಮಿ ಮತ್ತು ಮನೆಗಳನ್ನು ಕಳೆದುಕೊಳ್ಳುವ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕೇವಲ ಸ್ಥಳಾಂತರ ಮಾಡಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಬೇಡ ಎಂದು ಹೇಳಿದರು.