ಸಿದ್ದು ಸರ್ಕಾರ ಸಾಧನೆ ಶೂನ್ಯ

ಬೆಂಗಳೂರು, ಮೇ ೨೦- ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ೧ ವರ್ಷದ ಸಾಧನೆ ಶೂನ್ಯ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು ಪೂರೈಸಿದ್ದು ವರುಷ ಮಾತ್ರ, ಆದರೆ ಸಾಧಿಸಿದ್ದು ಶೂನ್ಯ. ಖಜಾನೆ ಖಾಲಿ.. ಖಾಲಿ.. ವಸೂಲಿ ಭಾರೀ.. ಭಾರೀ.. ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಬಿಟ್ಟಿ ಭಾಗ್ಯಗಳಿಗಾಗಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಪರಿಣಾಮ ನಿರುದ್ಯೋಗ ಬವಣೆ ಹೆಚ್ಚಿದೆ. ಶಿಕ್ಷಣ ಕ್ಷೇತ್ರ ಎಡವಿ ಬಿದ್ದಿದ್ದು, ಉತ್ಪನ್ನ ಕ್ಷೇತ್ರ ಸೊರಗಿದ್ದು, ನಾರಿ ಕುಲ ರಕ್ಷಣೆ ಇಲ್ಲದೆ ನಲುಗಿದ್ದು, ಬೆಳೆಯೆಲ್ಲಾ ಒಣಗಿದ್ದು, ದಲಿತ ಕಲ್ಯಾಣ ಕಾರ್ಯಗಳು ಕುಸಿಯಿತು. ಹಿಂದುಳಿದವರ ಅಭಿವೃದ್ಧಿ ಹಿಂದುಳಿಯಿತು. ರೈತರ ಬಾಳು ಗೋಳಾಯಿತು ಎಂದು ವಿಜಯೇಂದ್ರ ಟ್ವೀಟ್‌ನಲ್ಲಿ ಹರಿಹಾಯ್ದಿದ್ದಾರೆ.