ಸಿದ್ದು ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

ಬೆಂಗಳೂರು,ಡಿ.೩- ಬಾಯಲ್ಲಿ ಜಾತ್ಯತೀತೆಯ ಜಪ ಮಾಡುತ್ತಲೇ ಸಂದೇಶ ಸನ್ನಿಧಿಯಲ್ಲಿ ಸಿದ್ಧಸೂತ್ರ ಹೆಣೆದ ರಕ್ಕಸ ರಾಜಕಾರಣಕ್ಕೆ ಕೊನೆಗಾಲ ಹತ್ತಿರದಲ್ಲೇ ಇದೆ.

ಹೀಗಂತ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಅವರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು ” ರಾಜಕೀಯ ಆಶ್ರಯ ನೀಡಿದ ಕಾಂಗ್ರೆಸ್ ಪಕ್ಷವನ್ನೇ ಹೆಬ್ಬಾವಿನಂತೆ ನುಂಗಲು ಹೊರಟಿರುವ ಸಿದ್ದಸೂತ್ರಧಾರನಿಗೆ ರಾಜಕೀಯ ಬದುಕು ಕೊಟ್ಟು ಬೆಳೆಸಿದ ಜೆಡಿಎಸ್ ಪಕ್ಷವನ್ನು ಮುಳುಗಿಸಿಬಿಡುವ ಹಗಲುಕನಸು ಬೇರೆ ಎಂದು ಆರೋಪಿಸಿದ್ದಾರೆ.”

ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಜಿ ಪ್ರಧಾನಿ ದೇವೇಗೌಡರು ಭೇಟಿ ಮಾಡಿರುವುವುದನ್ನು ಅವಕಾಶವಾದಿ ರಾಜಕಾರಣಿ ಎನ್ನುವ ನಾಲಗೆ, ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಂ ಎನ್ನುವ ನಾಲಗೆಯ ಮೇಲೆ ಪಕ್ಷನಿಷ್ಠೆ ಎನ್ನುವ ಪದ ಎಂದಾದರೂ ಬಂದಿದೆಯಾ ಅದಕ್ಕೆ ಆ ಪದ ಪರಮ ಅಪಥ್ಯ ಎನ್ನುವುದು ಇಡೀ ರಾಜ್ಯದ ಜನರಿಗೆ ಗೊತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ರಾಜಕೀಯ, ಸಂಕುಚಿತತೆಯ ಎಲ್ಲೆ ಮೀರಿದ್ದು ಎನ್ನುವುದನ್ನು ಆ ಇಬ್ಬರು ನಾಯಕರ ಭೇಟಿಯ ಚಿತ್ರಗಳೇ ಹೇಳುತ್ತವೆ. ಹೀಗಿದ್ದರೂ ಅಸೂಯೆ, ದ್ವೇಷ, ಅಸಹನೆ, ಸರ್ವಾಧಿಕಾರಿ ಮನೋಭಾವದ ಸಿದ್ದಕಲೆಯ ನಿಪುಣನಿಗೆ ರಾಜಕೀಯದಲ್ಲಿ ವಿರಳಾತಿ ವಿರಳವಾಗಿ ಕಾಣುವ ಇಂಥ ಭೇಟಿಗಳನ್ನು ಅರಗಿಸಿಕೊಳ್ಳುವುದು ಹೇಗೆ ತಾನೇ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ನನಗಿಲ್ಲದಿದ್ದರೆ ಯಾರಿಗೂ ಬೇಡ ಎನ್ನುವ ಸ್ವಾರ್ಥ ಮನೋಭಾವದಿಂದ ಸ್ವಪಕ್ಷವೂ ಇದ್ದ ಮೈತ್ರಿ ಸರಕಾರವನ್ನೇ ಸ್ವಾಹಾ ಮಾಡಿ ಆಪರೇಷನ್ ಕಮಲದ ಕೆಸರಿನಲ್ಲಿ ವಿಕೃತವಾಗಿ ಹೊರಳಾಡಿದವರು ಯಾರು ಎನ್ನುವುದು ಅವರ ಸ್ವಪಕ್ಷೀಯರಿಗೇ ಚೆನ್ನಾಗಿ ಗೊತ್ತಿದೆ ಎಂದು ಹರಿಹಾಯ್ದಿದ್ದಾರೆ.

ನಾಯಕರಿಗೆ ಗತಿ ಇಲ್ಲ, ಅಭ್ಯರ್ಥಿಗಳಿಗಂತೂ ದಟ್ಟ ದಾರಿದ್ರ್ಯ. ಇನ್ನು, ಪಕ್ಷದ ಬಗ್ಗೆ ಹೇಳುವುದೇ ಬೇಡ. ಅಧ್ಯಕ್ಷರಿಗೊಂದು ಕಾಂಗ್ರೆಸ್, ಪ್ರತಿಪಕ್ಷ ನಾಯಕರಿಗೊಂದು ಕಾಂಗ್ರೆಸ್. ಅಷ್ಟೇ ಅಲ್ಲ; ಜಿಲ್ಲೆಗಳಲ್ಲಿ ಎರಡೆರಡು ಕಾಂಗ್ರೆಸ್‌ಗಳು ಸಿದ್ದಸೂತ್ರಧಾರನಿಗೆ ಇದೆಲ್ಲ ಗೊತ್ತಿಲ್ಲವೇ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.