ಸಿದ್ದು ವಿರುದ್ಧ ಶ್ರೀರಾಮುಲು ಕಿಡಿ

ತುಮಕೂರು/ಸಿರಾ, ಅ. ೩೦- ಸಿರಾ ಉಪಚುನಾವಣೆಯಲ್ಲಿ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ಮುಖ್ಯಮಂತ್ರಿ ಸ್ಥಾನ ಮ್ಯೂಸಿಕಲ್ ಚೇರ್ ಆಟ ಅಲ್ಲ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಇಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯನವರದು ಬರೀ ಬೆನ್ನಿಗೆ ಚೂರಿ ಹಾಕುವ ಕೆಲಸ. ಜೆಡಿಎಸ್‌ನಿಂದ ರಾಜಕೀಯಕ್ಕೆ ಬಂದು ಈಗ ಆ ಪಕ್ಷಕ್ಕೆ ಮೋಸ ಮಾಡಿದ್ದಾರೆ. ದೇವೇಗೌಡರನ್ನು ತುಮಕೂರು ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಸಿ ಸೋಲಿಸುವ ಮೂಲಕ ಚೂರಿ ಹಾಕಿದ್ದಾರೆ. ಹೀಗಾಗಿ ಇವರಿಗೆ ಚೂರಿ ಸಿದ್ದರಾಮಣ್ಣ ಎಂದು ಹೆಸರಿಡಬೇಕು ಎಂದರು.
ಸಿರಾ ತಾಲ್ಲೂಕು ಮದಲೂರಿನಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಂಡೆ ಅಲಿಯಾಸ್ ಕಲ್ಲು ಶಿವಕುಮಾರ್ ಅವರು ಸಹ ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ಮುಖ್ಯಮಂತ್ರಿ ಸ್ಥಾನ ಎನ್ನುವುದು ಮ್ಯೂಸಿಕಲ್ ಚೇರ್ ಆಟ ಅಲ್ಲ ಎನ್ನವುದನ್ನು ಈ ಇಬ್ಬರು ಅರಿತುಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರನ್ನು ಶಿವಾಜಿ ಮಹರಾಜರಿಗೆ ಹೋಲಿಕೆ ಮಾಡಿದ್ದಾರೆ. ಈ ಹಿಂದೆ ಯುದ್ಧ ಗೆಲ್ಲಲು ಶಿವಾಜಿ ಮಹರಾಜನ್ನು ಕಳುಹಿಸುತ್ತಿದ್ದರು. ಹಾಗೆಯೇ ಎಲ್ಲಿ ಉಪಚುನಾವಣೆ ನಡೆಯುತ್ತದೋ ಅಲ್ಲಿಗೆ ಯುವ ನಾಯಕ ವಿಜಯೇಂದ್ರ ಹೋಗುತ್ತಾರೆ. ಇದರಲ್ಲೇನು ತಪ್ಪಿದೆ. ಪಕ್ಷದ ಕಾರ್ಯಕರ್ತರಾಗಿ ಅವರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಅಷ್ಟೆ ಎಂದರು.
ಸಿದ್ದರಾಮಯ್ಯ ಅವರ ರೀತಿ ಬೇರೆಯವರ ಬೆನ್ನಿಗೆ ಚೂರಿ ಹಾಕುವ ಕೆಲಸವೇನು ಮಾಡುತ್ತಿಲ್ಲವಲ್ಲಾ ಎಂದು ತಿರುಗೇಟು ನೀಡಿದರು.
ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಂಸದರಾದ ಪಿ.ಸಿ. ಮೋಹನ್ ಪ್ರತಾಪ್ ಸಿಂಹ, ತಿಪ್ಪಾರೆಡ್ಡಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಸುರೇಶ್‌ಗೌಡ, ರೇಣುಕಾಚಾರ್ಯ, ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ಜ್ಯೋತಿಗಣೇಶ್ ಮತ್ತಿತರರು ಭಾಗವಹಿಸಿದ್ದರು.