
ಬೆಂಗಳೂರು,ಆ.೮-ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ, ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನು ಸಮರ್ಥಿಸಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ರಾಜ್ಯಕ್ಕೆ ವಕ್ಕರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಸಚಿವರ ಸುಲಿಗೆಯನ್ನೇ ಸಮರ್ಥಿಸಿಕೊಳ್ಳುವ ಸಿದ್ದ ಕಲೆ ಅಸಹ್ಯ ಮತ್ತು ವಾಕರಿಕೆ ತರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ವರ್ಗಾವಣೆ ಕುರಿತಂತೆ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಮಂಡ್ಯ ಜಿಲ್ಲೆಯ ಕೃಷಿ ಆಧಿಕಾರಿಗಳು ಲಂಚ ಕೇಳಿದ್ದಾರೆ ಎಂಬ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿರುವುದು ನಕಲಿ ಪತ್ರ ಎನ್ನುವುದಾದರೆ ರಾಜ್ಯಪಾಲರ ಕಾರ್ಯಾಲಯ ನಕಲಿ ಪತ್ರದ ಕುರಿತು ಕ್ರಮ ಜರುಗಿಸಿ ಷರಾಬರೆದಿದೆಯೇ? ಸುಳ್ಳಿನ ಪತ್ರಕ್ಕೆ ರಾಜ್ಯಪಾಲರು ಸ್ಪಂದಿಸಿದ್ದಾರೆಯೇ? ರಾಜಧiದ ಪ್ರವಚಕಾರರೇ ರಾಜಭವನದ ಪಾವಿತ್ರ್ಯವನ್ನೇ ಶಂಕಿಸುವುದು ತರವೇ? ಇದು ಸ್ವಯಂಘೋಷಿತ ನಕಲಿ ಸಂವಿಧಾನ ತಜ್ಞನಿಗೆ ಭೂಷಣವಲ್ಲ ಎಂದು ಹೇಳಿದ್ದಾರೆ.
ಕಂಡೋರಾ ಭುಜದ ಮೇಲೆ ಬಂದೂಕು ಇಟ್ಟು ಇನ್ನೊಬ್ಬರ ರಾಜಕೀಯ ಜೀವನ ಎತ್ತಿ ಬಿಡುವ ನಿಮ್ಮಂತ ಎತ್ತುವಳಿ ಗಿರಾಕಿಗೆ ನಕಲಿ ಪತ್ರಗಳ ಸೃಷ್ಟಿ . ಬೆಣ್ಣೆ ಕಡಿದಷ್ಟೇ ಸಲೀಸು ಮತ್ತೊಬ್ಬರ ಶ್ರಮದ ಬೆವರೇ ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ಹವಿಸ್ಸು ಎಂದು ಕಟಕಿಯಾಡಿದ್ದಾರೆ.
ಶಾಸಕರೇ ಬರೆದ ಪತ್ರವೆಂದೇ ನಕಲಿ ಎಂದು ಬಿಂಬಿಸಿದ ನಕಲಿ ರಾಮನ ಉಪ್ಪು, ಹುಳಿ, ಖಾರದ ಬಗ್ಗೆ ನನಗೇನು ಗೊತ್ತಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಉಗಿದು ಉಪ್ಪ ಹಾಕಿದ ಮೇಲೆ ಆ ನಕಲಿ ಪತ್ರ ಅಸಲಿಯಾದ ಕತೆಯ ಹಕಿಕತ್ತು ಏನಿರಬಹುದು ಸಿಎಂ ಸಾಹೇಬರೇ ಕುಮಾರಸ್ವಾಮಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ಇಷ್ಷಕ್ಕೆ ನಿಲ್ಲಲಿಲ್ಲ. ನಿಮ್ಮ ರಾಜಕೀಯ ಬದುಕಿಗೆ ಬ್ಲಾಕ್‌ಮೇಲೇ ಬಂಡವಾಳ. ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಅಪ್ಪಯ್ಯ ಮತ್ತು ಅತೀಂದ್ರನ ಆಟಾಟೋಪ ಕಂಡು ಹೌಹಾರಿದವರು ಯಾರು? ವರ್ಗಾವಣೆ ಪಟ್ಟಿಗೆ ಅಲ್ಲಿ ಬಿದ್ದ ಟಿಕ್ಕುಗಳ ಲೆಕ್ಕ ಹೇಳಬೇಕಾ ಟಿಕ ಟಿಕ ಸಿದ್ದರಾಮಯ್ಯ ಎಂದು ಲೇವಡಿ ಮಾಡಿದ್ದಾರೆ.
ಮತ್ತೆ ವಿದೇಶಕ್ಕೆ ಎಚ್‌ಡಿಕೆ
ಇತ್ತೀಚೆಗಷ್ಟೇ ಕುಟುಂಬ ಸಮೇತರಾಗಿ ಯೂರೋಪ್ ಪ್ರವಾಸ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇದೀಗ ಮತ್ತೆ ವಿದೇಶಿ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಕೌತುಕಕ್ಕೆ ಕಾರಣವಾಗಿದೆ.
ನಿನ್ನೆ ರಾತ್ರಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ತಮ್ಮ ಆಪ್ತರ ಜೊತೆಗೆ ಕೌಲಾಲಂಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕುಮಾರಸ್ವಾಮಿ ಸೇರಿದಂತೆ ಐವರು ಆಪ್ತರೊಂದಿಗೆ ತೆರಳಿದ್ದಾರೆ.ಮಾಜಿ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ಜೊತೆಯಲ್ಲಿದ್ದಾರೆ. ಆದರೆ ಮಲೇಷಿಯಾ ಪ್ರವಾಸ ಕೈಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ಭ್ಯವಾಗಿಲ್ಲ. ಕಳೆದ ವಾರ ಯೂರೋಪ್ ಪ್ರವಾಸ ಕೈಗೊಂಡಿದ್ದ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಕುಮಾರಸ್ವಾಮಿ ವಿದೇಶಕ್ಕೆ ತೆರಳಿ ಸಂಚು ರೂಪಿಸುತ್ತಿದ್ದಾರೆ ಎಂದು ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು.
ಮೂಲಗಳ ಪ್ರಕಾರ ಆಗಸ್ಟ್ ೧೨ ರಂದು ಕುಮಾರಸ್ವಾಮಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.