ಸಿದ್ದು ವಿರುದ್ದ ಮುಂದುವರಿದ ಬಿಜೆಪಿ ಟ್ವೀಟ್ ವಾಗ್ದಾಳಿ

ಬೆಂಗಳೂರು,ಅ.27- ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾದಾಗಿನಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಬಿಜೆಪಿ ನಡುವೆ ಟ್ವೀಟ್ ಸಮರ ನಡೆಯುತ್ತಿದೆ.

ಸಿದ್ದರಾಮಯ್ಯ ಮತ್ತು ನಳೀನ್ ಕುಮಾರ್ ಕಟೀಲ್ ನಡುವೆ ಆರೋಪ ಪತ್ಯಾರೋಪ ತಾರಕ್ಕೇರಿದೆ.

ಈ ನಡುವೆ ಮತ್ತೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಸಿದ್ದರಾಮಯ್ಯ‌ ವಿರುದ್ದ ವಾಗ್ದಾಳಿ ನಡಿಸಿದ್ದು ಡಿಜೆ ಹಳ್ಳಿ ಗಲಭೆಯ ನಂತರ ನೀವು ಹಿಂದೂ ಮುಸ್ಲಿಂ ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದ್ದಿರಿ ಎಂದಿದೆ.

ಗಲಭೆ ಮಾಡಿ ದಲಿತ ಶಾಸಕನ ಮನೆ ಸುಟ್ಟಿದ್ದು ಯಾರು ಎಂಬುದು ಎಲ್ಲರಿಗೂ ತಿಳಿದಿತ್ತು, ಆದರೂ ನೀವು ಹಿಂದೂ ಸಮಾಜಕ್ಕೆ ಬುದ್ಧಿ ಹೇಳಿದ್ದು ಯಾವ ಸೀಮೆಯ ನ್ಯಾಯ? ಎಂದು ಪ್ರಶ್ನಿಸಿದೆ.

ಕುಖ್ಯಾತ ಪಿಎಫ್‌ಐ, ಕೆಎಫ್‌ಡಿ, ಎಸ್‌ಡಿಪಿಐ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲಾಗಿ, 170 ಕ್ಕೂ ಹೆಚ್ಚು ಪ್ರಕರಣಗಳನ್ನು ವಾಪಾಸ್‌ ಪಡೆದಿರಿ. ನಿಮ್ಮ ಈ ನಿರ್ಧಾರದಿಂದ ರಾಜ್ಯದಲ್ಲಿ ಸಮಾಜಘಾತುಕರಿಗೆ ಬಲಿಯಾದ ಹಿಂದೂ ಕಾರ್ಯಕರ್ತರ ಹೆತ್ತ ತಾಯಿ ಶಾಪ ನಿಮಗೆ ತಟ್ಟದೆ ಇದ್ದೀತೆ ಎಂದು ಹೇಳಿದೆ.