ಸಿದ್ದು ಮನವೊಲಿಕೆ ತೆವಲು ನನಗಿಲ್ಲ

ಮೈಸೂರು, ಡಿ. ೨೯. ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ.. ಎಸ್ ಟಿ ಗೆ ಸೇರ್ಪಡೆ ಕುರಿತ ಹೋರಾಟ ದಲ್ಲಿ ಭಾಗಿಯಾಗುವಂತೆ ಸಮುದಾಯದ ಮುಖಂಡ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಮನವೊಲಿಸುವ ತೆವಲು ನನಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಅವರು ಇಂದಿಲ್ಲಿ ತಿರುಗೇಟು ನೀಡಿದ್ದಾರೆ.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದು ನಡೆಸುತ್ತಿರುವ ಹೋರಾಟ ವಿಚಾರದಲ್ಲಿ ಸಮುದಾಯ ವಿಭಾಗ ಆಗಿಲ್ಲ. ಸಮುದಾಯದ ಬಹುತೇಕ ನಾಯಕರು ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಸಮುದಾಯದ ಗುರುಗಳು ಆದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದೇವೆ ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಹೋರಾಟದ ಜೊತೆ ಕೈಜೋಡಿಸಿದ್ದಾರೆ. ಇದು ಹೋರಾಟ ಮಾತ್ರವಲ್ಲದೆ ಜನಜಾಗೃತಿ ಮೂಡಿಸುವ ಆಂದೋಲನವಾಗಿದೆ ಎಂದು ಅವರು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆ ಕಾಲದಲ್ಲಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಕುರಿತು ಕೇಂದ್ರ ಸರ್ಕಾರಕ್ಕೆ ವರದಿಯನ್ನು ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ವಿಚಾರದಲ್ಲಿ ಸಾಕಷ್ಟು ರಾಜಕೀಯ ಒತ್ತಡ ಇತ್ತು ಎಂಬ ಮಾತು ಕೇಳಿಬಂದಿತ್ತು ಎಂದರು.
ಹೋರಾಟದ ವಿಚಾರಗಳಲ್ಲಿ ಗುರುಗಳು ನಮ್ಮನ್ನು ಕೇಳಿಕೊಂಡಿದ್ದರು. ಸಮುದಾಯದ ಮುಖಂಡರಾದ ರೇವಣ್ಣ ಬಂಡೆಪ್ಪ ಕಾಶಂಪುರ್ ಮುಂದಾದರು ಮನೆಗೆ ಬಂದು ಹೋರಾಟದ ಜೊತೆ ಕೈಜೋಡಿಸುವಂತೆ ಕೇಳಿಕೊಂಡಿದ್ದಾರೆ ಹೀಗಾಗಿ ಜನಜಾಗೃತಿ ಮೂಡಿಸುವ ಕೆಲಸದಲ್ಲಿ ನಾನು ಸಹ ಭಾಗಿಯಾಗಿದ್ದೇನೆ ಎಂದು ತಿಳಿಸಿದರು.
ಗುರುಗಳನ್ನು ದಾರಿ ತಪ್ಪಿಸುವ ಕೆಲಸ ಯಾರಿಂದಲೂ ಸಾಧ್ಯವಿಲ್ಲ.. ಕುರುಬ ಸಮುದಾಯ ಇಬ್ಭಾಗ ಆಗಿಲ್ಲ. ಸಿದ್ದರಾಮಯ್ಯ ಅವರನ್ನು ಮನವೊಲಿಸುವ ತೆವಲು ನನಗಿಲ್ಲ.ಸಮಾಜದ ಬಹುತೇಕ ಮುಖಂಡರು ಹೋರಾಟದಲ್ಲಿ ಭಾಗಿಯಾಗಿದ್ದಾರೆ ಯಾರಿಗೆ ಬೇಕು ಅವರು ಬರುತ್ತಾರೆ ಇಲ್ಲ ಅಂದರೆ ಇಲ್ಲ ಎಂದು ಈಶ್ವರಪ್ಪ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.
ತೀವ್ರ ಸಂತಾಪ
ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆಗೆ ಈಶ್ವರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಧರ್ಮ ಗೌಡರ ಅಕಾಲಿಕ ಸಾವು ಸುದ್ದಿ ಕೇಳಿ ಆಘಾತವಾಗಿದೆ ಎಂದಿದ್ದಾರೆ.
ಮೃದುಸ್ವಭಾವದ ಹಾಗೂ ಎಲ್ಲರನ್ನು ಪ್ರೀತಿಯಿಂದ ಕಾಣುವ ವ್ಯಕ್ತಿಯಾಗಿದ್ದ ಧರ್ಮನೇ ಗೌಡರು ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ನಾವ್ಯಾರು ನಿರೀಕ್ಷಿಸಿರಲಿಲ್ಲ. ಅವರ ಅಗಲಿಕೆಯಿಂದ ಉಂಟಾಗಿರುವ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದಯಾಮಯನಾದ ಭಗವಂತ ಕರುಣಿಸಲಿ ಎಂದು ಈಶ್ವರಪ್ಪ ಪ್ರಾರ್ಥಿಸಿದ್ದಾರೆ.
ಆತ್ಮಹತ್ಯೆಗೆ ಕಾರಣವೇನೆಂಬುದು ತಿಳಿಯದೆ ಈ ಬಗ್ಗೆ ವಿಶ್ಲೇಷಣೆ ಮಾಡಲಿಕ್ಕೆ ಆಗುವುದಿಲ್ಲ.ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.