ಬೆಂಗಳೂರು, ಜೂ. ೨೬- ವಿಧಾನಮಂಡಲದ ಬಜೆಟ್ ಅಧಿವೇಶನ ಜುಲೈ ೩ ರಿಂದ ಆರಂಭವಾಗುತ್ತಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ೨೦೨೩-೨೪ನೇ ಸಾಲಿನ ಹೊಸ ಬಜೆಟ್ ಮಂಡನೆಗೆ ತಯಾರಿ ನಡೆಸಿದ್ದಾರೆ.ಈ ಬಾರಿಯ ಬಜೆಟ್ ಗಾತ್ರ ೩.೫ ಲಕ್ಷ ಕೋಟಿ ರೂ. ಗಳಷ್ಟಿರಲಿದೆ ಎಂದು ಅಂದಾಜಿಸಲಾಗಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಜೆಟ್ ಮಂಡನೆ ಸಂಬಂಧ ಈಗಾಗಲೇ ವಿವಿಧ ಇಲಾಖೆಯ ಸಚಿವರು, ಹಿರಿಯ ಅಧಿಕಾರಿಗಳ ಜತೆ ಸರಣಿ ಸಭೆಗಳನ್ನು ನಡೆಸಿದ್ದು, ಜು. ೭ ರಂದು ನೂತನ ಬಜೆಟ್‌ನ್ನು ಮಂಡಿಸಲಿದ್ದಾರೆ.ಈ ಬಜೆಟ್‌ನಲ್ಲಿ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳಿಗೂ ಅನುದಾನವನ್ನು ಒದಗಿಸಲಿದ್ದಾರೆ. ಈಗಿನ ಆರ್ಥಿಕ ಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡರೆ ಉಳಿತಾಯದ ಬಜೆಟ್ ಮಂಡನೆ ಕಷ್ಟ ಸಾಧ್ಯ ಎಂದು ಹೇಳಲಾಗುತ್ತಿದೆ.ಆದರೂ ಮಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಬಜೆಟ್ ಪೂರ್ವ ಸಭೆಗಳಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಬಗ್ಗೆಯೂ ಚರ್ಚೆ ನಡೆಸಿದ್ದು, ಈ ಗ್ಯಾರಂಟಿ ಯೋಜನೆಗಳಿಗೆ ಆದಾಯ ಮೂಲಗಳನ್ನು ಹೆಚ್ಚಿಸುವತ್ತ ಗಮನಹರಿಸಿದ್ದಾರೆ.
ಆದಾಯ ಸಂಗ್ರಹವನ್ನು ಹೆಚ್ಚಿಗೆ ಮಾಡಲು ತೆರಿಗೆ ಸಂಗ್ರಹಿಸುವ ಅಬಕಾರಿ, ವಾಣಿಜ್ಯ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳಿಗೆ ಹೆಚ್ಚಿನ ಆದಾಯ ಸಂಗ್ರಹಕ್ಕೂ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.ಈ ಹಿಂದೆ ಬಿಜೆಪಿಯ ಬಸವರಾಜಬೊಮ್ಮಾಯಿ ನೇತೃತ್ವದ ಸರ್ಕಾರ ಫೆಬ್ರವರಿಯಲ್ಲಿ ೩೦೯೧೮೨ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಆ ಬಜೆಟ್ ೪೦೨ ಕೋಟಿ ರೂ.ಗಳ ಉಳಿತಾಯ ಬಜೆಟ್ ಎಂದು ಬಸವರಾಜಬೊಮ್ಮಾಯಿ ಹೇಳಿದ್ದರು. ಬೊಮ್ಮಾಯಿ ಅವರ ಬಜೆಟ್‌ಗಿಂದ ೧೫ ಸಾವಿರ ಕೋಟಿ ರೂ. ಹೆಚ್ಚುವರಿ ಗಾತ್ರದ ಬಜೆಟ್ ಮಂಡಿಸಲು ತಯಾರಿ ನಡೆದಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ೩.೨೫ ಲಕ್ಷ ಕೋಟಿ ರೂ.ಗಾತ್ರದ ಬಜೆಟ್ ಮಂಡಿಸಲಿದ್ದಾರೆ ಎಂದು ಹೇಳಲಾಗಿದೆ.