
ಬೆಂಗಳೂರು, ಮೇ ೨೩- ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂಬ ತಮ್ಮ ಹೇಳಿಕೆ ಕಾಂಗ್ರೆಸ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಗಿರುವಾಗಲೇ ಸಚಿವ ಎಂ.ಬಿ. ಪಾಟೀಲ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ನಾನು ಹೇಳಿದ್ದೇನೆ ಎಂದಿದ್ದಾರೆ.
ಮೈಸೂರಿನಲ್ಲಿ ನಿನ್ನೆ ಸಚಿವ ಎಂ.ಬಿ. ಪಾಟೀಲ್ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.
ಇದರ ನಡುವೆಯೇ ಇಂದು ಬೆಳಿಗ್ಗೆ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ಅವರು ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ನಾನು ಹೇಳಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ನಾನು ಪದೇ ಪದೇ ಮಾತನಾಡಲ್ಲ. ನಿನ್ನೆ ಮಾಧ್ಯಮದವರು ಸಿದ್ದರಾಮಯ್ಯನವರು ಬದಲಾಗುತ್ತಾರ ಎಂದು ಕೇಳಿದರು. ಅದಕ್ಕೆ ಉತ್ತರ ನೀಡಿದೆ ಅಷ್ಟೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರುತ್ತಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಎಂದು ಹೇಳಿದ್ದರು. ಅದನ್ನೆ ನಾನು ಹೇಳಿದ್ದೇನೆ. ಅಧಿಕಾರ ಹಂಚಿಕೆ ಜನರ ಜತೆ ಮಾತ್ರ ಎಂದು ವೇಣುಗೋಪಾಲ್ ತಿಳಿಸಿದ್ದರು. ಅದನ್ನು ನಾನು ಹೇಳಿದ್ದೇನೆ ಅಷ್ಟೆ ಎಂದರು.
ಅಧಿಕಾರ ಹಂಚಿಕೆಯ ಸಂಧಾನ ಸೂತ್ರದ ಬಗ್ಗೆ ನನಗೆ ಗೊತ್ತಿಲ್ಲ. ನಾನು ವೈಯುಕ್ತಿಕವಾಗಿ ಮಾತನಾಡಿಲ್ಲ. ವರಿಷ್ಠರ ಹೇಳಿಕೆಯನ್ನು ಪ್ರಸ್ತಾಪಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಮುಂದುವರೆಯುತ್ತಾರೆ ಎಂದು ವರಿಷ್ಠರು ಹೇಳಿದ್ದರು. ಅದನ್ನು ಹೇಳಿದ್ದೇನೆ. ಇದರಲ್ಲಿ ನನ್ನ ವೈಯುಕ್ತಿಕ ಏನಿದೆ ಎಂದರು.
ಖಾತೆ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನ ಮಾಡುತ್ತಾರೆ. ನಾನು ನನ್ನ ಅಭಿಪ್ರಾಯವನ್ನು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ. ಈ ಹಿಂದೆ ಜಲಸಂಪನ್ಮೂಲ ಖಾತೆಯನ್ನು ನಾನು ನಿಭಾಯಿಸಿದ್ದೆ ಎಂದು ಅವರು ಹೇಳಿದರು.