ಸಿದ್ದು ಪರ ಸೊಸೆ ಮತಬೇಟೆ

ಮೈಸೂರು,ಏ.೨೭- ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣಕ್ಕಿಳಿದಿರುವ ವರುಣಾ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಸಿದ್ದರಾಮಯ್ಯ ಕುಟುಂಬದಿಂದ ಮಹಿಳೆಯರು ಪ್ರಚಾರಕ್ಕಿಳಿದಿದ್ದಾರೆ.ಸಿದ್ದರಾಮಯ್ಯ ಪರ ತಮ್ಮ ಸೊಸೆ ಸ್ಮಿತಾ ರಾಕೇಶ್ ಮಾವನ ಪರ ವರುಣ ಕ್ಷೇತ್ರದ ಭಾಗಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.ವರುಣಾ ಕ್ಷೇತ್ರದ ತಾಯೂರು ಗ್ರಾಮ ಪಂಚಾಯ್ತಿಯಲ್ಲಿ ಅಬ್ಬರದ ಪ್ರಚಾರ ನಡೆಸಿರುವ ಸೊಸೆ ಸ್ಮಿತಾ ರಾಕೇಶ್ ಮನೆ ಮನೆಗೆ ತೆರಳಿ ಮತಯಾಚಿಸಿದ್ದಾರೆ. ಇದೇ ವೇಳೆ ಈ ಬಾರಿ ಅತಿಹೆಚ್ಚು ಮತಗಳಿಂದ ಮಾವನವರನ್ನ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ್ದಾರೆ.
ಸಿದ್ದು ಪರ ರಮ್ಯಾ,ವಿಜಯ್ ಪ್ರಚಾರ:
ಸಿದ್ದರಾಮಯ್ಯ ಪರ ನಟಿ ರಮ್ಯಾ ಹಾಗೂ ನಟ ದುನಿಯಾ ವಿಜಯ್ ವರುಣಾ ಕ್ಷೇತ್ರದಲ್ಲಿ ಪ್ರಚಾರ ನಡೆಸುವುದಾಗಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಈ ನಡುವೆ ತಾವೂ ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡಿದ್ದು, ಅತ್ಯಧಿಕ ಮತಗಳಿಂದ ಸಿದ್ದರಾಮಯ್ಯ ಅವರು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ಬಿಜೆಪಿಯವರಿಗೆ ನನ್ನ ತಂದೆ ಕೊಟ್ಟ ಆಡಳಿತದಲ್ಲಿ ತಪ್ಪು ಹುಡುಕಲಾಗುತ್ತಿಲ್ಲ, ಅವರ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಮಾಡೋಕೆ ಆಗ್ತಿಲ್ಲ. ಹಾಗಾಗಿ ಜಾತಿ ವಿರೋಧಿ ಹಣೆಪಟ್ಟಿ ಕಟ್ಟುವ ಪ್ರಯತ್ನ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟುವ ಪ್ರಯತ್ನವನ್ನ ಬಿಜೆಪಿ ಮಾಡ್ತಿದೆ. ಅದು ಯಶಸ್ವಿಯಾಗಲ್ಲ ಎಂದು ಹೇಳಿದ್ದಾರೆ.