ಸಿದ್ದು ಪರ್ಸೆಂಟೇಜ್ ರಾಜ

ಈಶ್ವರಪ್ಪ ಕಿಡಿ

ಮೈಸೂರು.ನ೨೦: ’ಕಾಂಗ್ರೆಸ್‌ನದ್ದೇ ಪರ್ಸೆಂಟೇಜ್ ಸರ್ಕಾರ. ಸಿದ್ದರಾಮಯ್ಯ ಪರ್ಸೆಂಟೇಜ್ ಕಿಂಗ್. ಅವರೇನು ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುವುದು’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಪರ್ಸೆಂಟೇಜ್ ಆರೋಪ ಸಂಬಂಧ ಗುತ್ತಿಗೆದಾರರ ಸಂಘದವರು ದಾಖಲೆ ನೀಡಿದರೆ ತನಿಖೆ ನಡೆಸಲಾಗುವುದು’ ಎಂದರು.ಮಳೆಯಿಂದ ಭಾರಿ ಅನಾಹುತ ಆಗಿದ್ದರೂ ಬಿಜೆಪಿಯವರು ಸಮಾವೇಶ ನಡೆಸಿ ಶಂಖ ಊದುತ್ತಿದ್ದಾರೆಂಬ ಎಚ್. ಡಿ. ಕುಮಾರಸ್ವಾಮಿ ಟೀಕೆಗೆ, ’ಜೆಡಿಎಸ್‌ನಲ್ಲಿ ಶಂಖ ಊದುವುದಕ್ಕೂ ಯಾರೂ ಇಲ್ಲದಂತಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‌ನವರು ಎಷ್ಟು ಮಂದಿ ಅಭ್ಯರ್ಥಿಗಳನ್ನು ಹಾಕುತ್ತಾರೆ ನೋಡೋಣ’ ಎಂದರು.
ವಿಧಾನಪರಿಷತ್ ಚುನಾವಣೆಯಲ್ಲಿ ಈ ಬಾರಿ ೧೫ರಿಂದ ೧೬ಸ್ಥಾನ ಗೆಲ್ಲಲಿದ್ದೇವೆ. ಈ ಮೂಲಕ ವಿಧಾನ ಪರಿಷತ್ ನಲ್ಲೂ ಬಿಜೆಪಿ ಬಹುಮತ ಹೊಂದಲಿದೆ’ ಎಂದು ಹೇಳಿದರು.

ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಶಾಸಕರು ಕಡಿಮೆ ಸಂಖ್ಯೆಯಲ್ಲಿದ್ದರು. ಈ ಬಾರಿ ಅತಿ ಹೆಚ್ಚು ಶಾಸಕರಿದ್ದಾರೆ. ಗ್ರಾ.ಪಂನಲ್ಲೂ ಕಡಿಮೆ ಸಂಖ್ಯೆಯಲ್ಲಿ ಸದಸ್ಯರಿದ್ದರು. ಆದರೆ ಈ ಬಾರಿ ಹೆಚ್ಚು ಮಂದಿ ಇದ್ದೇವೆ. ಮತದಾರರು ಅತಿ ಹೆಚ್ಚು ಇದ್ದು ಬಿಜೆಪಿ ಸದಸ್ಯರು ಗೆಲ್ಲಲಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಪ್ರದೇಶಕ್ಕೆ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳು, ಹಾಗೂ ರಾಜ್ಯದಲ್ಲಿ ಯಡಿಯೂರಪ್ಪನವರು, ಬಸವರಾಜ ಬೊಮ್ಮಾಯಿಯವರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳು ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಿದೆ. ಬಿಜೆಪಿ ಹೆಚ್ಚು ಸ್ಥಾನವನ್ನು ಪಡೆದು ಈಗಾಗಲೇ ವಿಧಾನಸಭೆಯಲ್ಲಿ ಪೂರ್ಣ ಬಹುಮತವಿದೆ. ವಿಧಾನ ಪರಿಷತ್ ನಲ್ಲಿ ಕೂಡ ಪೂರ್ಣ ಬಹುಮತ ಬರಲಿದೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದರು.
ರಾಜ್ಯದಲ್ಲಿ ವಿಶೇಷವಾಗಿ ನರೇಗಾ ಯೋಜನೆ, ಪ್ರಧಾನಿಯವರು ದೇಶದಲ್ಲಿ ಯಾವುದೇ ವ್ಯಕ್ತಿ ಉದ್ಯೋಗವಿಲ್ಲದೆ ಉಪವಾಸವಿರಬಾರದು. ಎಂದು ಯಾರ್ಯಾರು ಜಾಬ್ ಕಾರ್ಡ್ ಬಯಸುತ್ತಾರೋ ಅವರಿಗೆ ಜಾಬ್ ಕಾರ್ಡ್, ಅತಿ ಹೆಚ್ಚು ಉದ್ಯೋಗ ಕೇಳಿ ಬಂದವರಿಗೆ ಉದ್ಯೋಗ ನೀಡುವಂತೆ ಹೇಳಿದ್ದರು. ಅದರಂತೆ ಕಳೆದ ವರ್ಷ ೧೩ಕೋಟಿ ಗುರಿಯಾಗಿ ಕೊಟ್ಟಿದ್ದರು. ೧೫ ಕೋಟಿ ಸಾಧನೆ ಮಾಡಿದ್ದೇವೆ. ಇದೀಗ ೧೫೦ದಿನವನ್ನು ಮಾನವ ದಿನವನ್ನಾಗಿ ಮಾಡಿಕೊಟ್ಟಿದ್ದು ೪೦೦ಕೋಟಿಗಳಷ್ಟು ಹೆಚ್ಚಿಗೆ ನೀಡಲಾಗಿದೆ. ಸಣ್ಣ ರೈತರ ಆಸ್ತಿ ಜಾಸ್ತಿಯಾಗಲು ನರೇಗಾ ಯೋಜನೆ ಅನುಕೂಲವಾಗುತ್ತಿದೆ. ಕಲ್ಯಾಣಗಳ ಅಭಿವೃದ್ಧಿ ಕೂಡ ಆಗುತ್ತಿದೆ. ರಾಜ್ಯ ಸರ್ಕಾರದ ಆಸ್ತಿ ಕೂಡ ಹೆಚ್ಚುತ್ತಿದೆ ಎಂದು ತಿಳಿಸಿದರು.