ಸಿದ್ದು ನಿವಾಸಕ್ಕೆ ಬಿಗಿ ಭದ್ರತೆ

ಬೆಂಗಳೂರು, ಮೇ.೧೮- ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿ ಎರಡನೇ ಬಾರಿಗೆ ಸಿದ್ದರಾಮಯ್ಯ ಆಯ್ಕೆಯಾಗುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆ ಬೆಂಗಳೂರಿನ ನಿವಾಸಕ್ಕೆ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ.
ನಗರದ ಕುಮಾರಕೃಪಾದಲ್ಲಿರುವ ಸಿದ್ದರಾಮಯ್ಯ ನಿವಾಸದ ಬಳಿ ಬೆಂಬಲಿಗರು, ಅಭಿಮಾನಿಗಳು ಅವರ ನಿವಾಸದ ಮುಂದೆ ಜಮಾಯಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ೭೦ ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಒಂದು ಕೆಎಸ್ ಆರ್ ಪಿ ವಾಹನ ಸೇರಿ ೭೦ ಕ್ಕೂ ಹೆಚ್ಚು ಮಂದಿಯನ್ನು ನಿಯೋಜನೆ ಮಾಡಲಾಗಿದೆ. ಇನ್ನೂ, ಮನೆಯೊಳಗೆ ಅಭಿಮಾನಿಗಳು ಹೋಗದಂತೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ.
ನಿನ್ನೆಯಿಂದಲೇ ಅಭಿಮಾನಿಗಳು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಇಂದು ಈ ಸಂಭ್ರಮ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಶಿವಾನಂದ ವೃತ್ತದ ಸಮೀಪದ ಸರ್ಕಾರಿ ನಿವಾಸದ ಸುತ್ತ ಪೊಲೀಸ್ ಸರ್ಪಗಾವಲು ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಮುಂದಿನ ಮುಖ್ಯಮಂತ್ರಿ ನಿವಾಸಕ್ಕೆ ನಿಗದಿಯಂತೆ ಹೆಚ್ಚುವರಿ ಭದ್ರತೆ ಒದಗಿಸುವ ಕಾರ್ಯ ನಡೆದಿದೆ. ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ಸಿದ್ದರಾಮಯ್ಯ ಯಾವ ನಿವಾಸವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಆಧರಿಸಿ ಅಲ್ಲಿವರೆಗೂ ಈಗ ವಾಸ್ತವ್ಯ ಹೂಡಿರುವ ಸರ್ಕಾರಿ ನಿವಾಸಕ್ಕೆ ಭದ್ರತೆ ಮುಂದುವರೆಯಲಿದೆ.ಕಳೆದ ಐದು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿದ್ದಂತ ಕರ್ನಾಟಕ ಮುಂದಿನ ಮುಖ್ಯಮಂತ್ರಿ ಆಯ್ಕೆ ಕಗ್ಗಂಟು ಬಗೆ ಹರಿದಿದೆ. ಮೊದಲ ಅವಧಿಗೆ ಸಿದ್ಧರಾಮಯ್ಯ ಸಿಎಂ, ಆ ಬಳಿಕ ಡಿಕೆ ಶಿವಕುಮಾರ್ ಎರಡೂವರೆ ವರ್ಷ ಸಿಎಂ ಪಟ್ಟದ ಷರತ್ತಿಗೆ ಡಿಕೆಶಿ ಒಪ್ಪಿದ್ದಾರೆ ಎನ್ನಲಾಗಿದೆ. ಹೀಗಾಗಿಯೆ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಕಾಂಗ್ರೆಸ್ ಶಾಸಕಾಂಗ ಸಭೆ ಕೂಡ ನಡೆಯಲಿದ್ದು, ಅಲ್ಲಿ ಅಧಿಕೃತ ಘೋಷಣೆಯಾಗಲಿದೆ.