ಸಿದ್ದು ತವರು ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್‍ಗೆ ಜೈ

ಮೈಸೂರು,ಜು.15:- ವಿಪಕ್ಷ ನಾಯಕ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮುಂದಿನ ಸಿಎಂ ಎನ್ನುವ ಘೋಷಣೆ ಅಭಿಮಾನಿಗಳಿಂದ ಮೊಳಗಿತು.
ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಈ ವೇಳೆ ಮುಂದಿನ ಸಿಎಂ ಡಿ.ಕೆ.ಶಿವಕುಮಾರ್ ಎಂದು ಅಭಿಮಾನಿಗಳು ಘೋಷಣೆ ಕೂಗಿದರು. ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ವಾಪಸ್ಸು ತೆರಳುವಾಗ ಮುಂದಿನ ಸಿಎಂ ಡಿ.ಕೆ.ಶಿವಕುಮಾರ್ ಗೆ ಜೈ ಎಂದು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಈ ವೇಳೆ ಕಾರ್ಯಕರ್ತರ ಜೊತೆ ಜೋಳ ಖರೀದಿಸಿ ಡಿ.ಕೆ.ಶಿವಕುಮಾರ್ ಅವರೂ ಕೂಡ ತಿಂದರು. ವಾಪಸ್ಸು ಮೈಸೂರು ನಗರ ಸಾರಿಗೆ ಬಸ್ ನಲ್ಲೇ ಬೆಟ್ಟದಿಂದ ತೆರಳಿದರು.
ಇದಕ್ಕೂ ಮುನ್ನ ಸಿದ್ದರಾಮೋತ್ಸವ ಆಚರಣೆ ವಿಚಾರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಅದು ಬರೀ ಹುಟ್ಟುಹಬ್ಬದ ವಿಚಾರ ಅಲ್ಲ. ಅದರ ಮೂಲಕ ಕಾಂಗ್ರೆಸ್ ಸರ್ಕಾರ ಆಡಳಿತ ಸಂದರ್ಭದ ಪ್ರಗತಿಗಳ ಬಗ್ಗೆ ಮೆಲುಕು ಹಾಕುತ್ತೇವೆ. ನಮ್ಮ ಆಡಳಿತ ಅವಧಿಯಲ್ಲಿ ಏನಾಗಿತ್ತು . ಈಗ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಜನರಿಗೆ ಆ ಮೂಲಕ ವಿವರಿಸುತ್ತೇವೆ. ಬಿಜೆಪಿಯವರು ವಿನಾಕಾರಣ ಇದರ ಬಗ್ಗೆ ಮಾತನಾಡುತ್ತಿದ್ದಾರೆ ಅಷ್ಟೇ ಎಂದರು.
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ ಕರ್ನಾಟಕದಲ್ಲಿ 350ಕಿ.ಮಿ ಯಾತ್ರೆ ನಡೆಯುತ್ತದೆ. ಅದರ ರೂಪುರೇಷೆಗಳು ಈಗ ಸಿದ್ದವಾಗುತ್ತಿವೆ
ಕೇರಳದಿಂದ ಕರ್ನಾಟಕಕ್ಕೆ ಯಾತ್ರೆ ಬರಲಿದೆ. ಅದರ ಎಲ್ಲಾ ರೂಪುರೇಷೆಗಳು ಶೀಘ್ರದಲ್ಲೇ ಅಂತಿಮವಾಗಲಿದೆ. ಜುಲೈ19ರಂದು ಮೈಸೂರಿಗೆ ಬಂದು ಅದರ ಪೂರ್ವಾಭಾವಿ ಸಭೆಗಳನ್ನು ನಡೆಸುತ್ತೇನೆ ಎಂದು ತಿಳಿಸಿದರು.
ಶಾಂತಿ ಬೇಕಾದರೇ ನೀವು ರಾಜ್ಯದ ಸಿಎಂ ಕೇಳಬೇಕು. ಶಾಂತಿ ಕದಡುವವರಿಗೆ ನೀವು ಈ ಪ್ರಶ್ನೆ ಮಾಡಬೇಕು ಎಂದು ಮಹಿಳೆಗೆ ಕಿವಿಮಾತು ಹೇಳಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.
ಅಲ್ಲಿನ ಜನ ನೆಮ್ಮದಿ ರಕ್ಷಣೆ ಕೇಳಿದ್ರಲ್ಲಿ ತಪ್ಪಿಲ್ಲ. ಸರ್ವಜನಾಂಗದ ಶಾಂತಿಯ ತೋಟ ನಮ್ಮದು. ಅರ್ಜಿ ಹಾಕಿಕೊಂಡು ಯಾರು ಯಾವ ಜಾತಿಯಲ್ಲಿ ಹುಟ್ಟಲ್ಲ. ನಾಯಕತ್ವ ವಹಿಸಿಕೊಂಡಿರುವ ಸರ್ಕಾರ ಕಾಳಜಿ ವಹಿಸಲಿ. ರಾಜ್ಯದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ಸರ್ಕಾರದ್ದು ಎಂದು ಹೇಳಿದರು.
ಈ ಸಂದರ್ಭ ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು ಸೇರಿದಂತೆ ಹಲವರು ಜೊತೆಗಿದ್ದರು.