ಸಿದ್ದು, ಡಿಕೆಶಿ, ಸುರ್ಜೆವಾಲಾ ಮೇಲೆ ನೀತಿ ಸಂಹಿತೆ ದೂರು ದಾಖಲು

ಮೈಸೂರು: ಏ.01:- ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿ ಮೂರು ದಿನವಷ್ಟೇ ಕಳೆದಿದ್ದು, ರಾಜ್ಯ ರಾಜಕಾರಣದಲ್ಲಿ ದೊಡ್ಡ ನಾಯಕರ ವಾಕ್ಸಮರ ಜೋರಾಗಿಯೇ ನಡೆಯುತ್ತಿದೆ. ಈ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲಾ ವಿರುದ್ಧ ಪ್ರಪ್ರಥಮವಾಗಿ ನೀತಿ ಸಂಹಿತೆಯಡಿ ದೂರು ದಾಖಲಿಸಲಾಗಿದೆ.
ಈ ಕುರಿತು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಬಿಜೆಪಿ ಎಸ್.ಸಿ.ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ಬಳಿಕವೂ ಬಿಜೆಪಿ ಸರ್ಕಾರ ಶೇ.40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಆರೋಪಿಸಿರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸುರ್ಜಿವಾಲಾ ವಿರುದ್ಧ ದೂರು ದಾಖಲಿಸಿರುವುದಾಗಿ ಹೇಳಿದರು. ನಾಲ್ಕು ವರ್ಷಗಳ ಸರ್ಕಾರ ಮಾಡಿ ಅನೇಕ ಅತ್ಯುತ್ತಮ ಕಾರ್ಯಕ್ರಮವನ್ನು ಮಾಡಿ, ಜನ ಸಂಕಲ್ಪದ ಯಾತ್ರೆಯ ಭಾಗವಾಗಿ ವಿಜಯಸಂಕಲ್ಪ ಯಾತ್ರೆ ಸಹ ಅದ್ಧೂರಿಯಾಗಿ ಮಾಡಿದ್ದೇವೆ. ಕಾಂಗ್ರೆಸ್ ಶೇ.40% ಕಮಿಷನ್ ಸರ್ಕಾರ ಎನ್ನುತ್ತಿದ್ದರು. ನಾವು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾಕಂದರೆ ನಮಗೆ ಯಾವುದೇ ಭಯವಿರಲಿಲ್ಲ. ಕಾರಣ ನಾವೇನೂ ಅಂತಹ ಭ್ರಷ್ಟಚಾರ ಮಾಡಿಯೂ ಇಲ್ಲ. ಆದರೆ, ನೀತಿ ಸಂಹಿತೆ ಜಾರಿಯಾದ ಬಳಿಕವೂ ಕಾಂಗ್ರೆಸ್ ನಾಯಕರು ಲೂಟಿ ಮಾಡಿದ್ದಾರೆ, ಪರ್ಸೆಂಟ್ ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಮಾಡಿದ ಆಪಾದನೆಗೆ ಋಜುವಾತು ಮಾಡಬೇಕು. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ದೂರು ನೀಡಿದ್ದೇನೆ ಎಂದು
ಹೀಗಿದೆ ನಮ್ಮ ಆಯ್ಕೆ:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಜನರಿಗಾಗಿ ಚುನಾವಣೆ ನಡೆಯುವಂತೆ ನಮ್ಮ ಪಕ್ಷ ತಳ ಮಟ್ಟದ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿ ಮುಂಬರುವ ಚುನಾವಣೆಯಲ್ಲಿ ಯಾರನ್ನು ಅಭ್ಯರ್ಥಿ ಮಾಡಬೇಕೆಂಬ ಅಭಿಪ್ರಾಯ ಸಂಗ್ರಹಿಸಲು ಬಂದಿದ್ದೇನೆ. ನಗರಾಧ್ಯಕ್ಷ ಶ್ರೀವತ್ಸ ಅವರ ನೇತೃತ್ವದಲ್ಲಿ ನಾಲ್ಕು ಕ್ಷೇತ್ರದ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಬ್ಯಾಲೆಟ್ ಮತದ ಮೂಲಕ ಸಂಗ್ರಹಿಸಿದ್ದೇವೆ. ನಾಳೆ ಅಧ್ಯಕ್ಷರಿಗೆ ತಲುಪಿಸಿ, ನಾಳಿದ್ದು ಕೋರ್ ಕಮಿಟಿ ಸಭೆ ನಡೆಸಿ ಎಲ್ಲರನ್ನೂ ಸಂಗ್ರಹಿಸಿ ದೆಹಲಿಯಲ್ಲಿ ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಆಗಲಿದೆ ಎಂದರು.
ಯಾರು ಭ್ರಷ್ಟಚಾರಿಗಳು:
ಇನೂ ನಮ್ಮದು ಶೇ.40ರಷ್ಟು ಕಮಿಷನ್ ಸರ್ಕಾರ ಆಗಿದ್ದರೆ ಕಾಂಗ್ರೆಸ್ ಪಕ್ಷದ ನಾಯಕರು ಕಾನೂನು ವ್ಯವಸ್ಥೆಯಡಿ, ನ್ಯಾಯಾಲಯ, ಲೋಕಾಯುಕ್ತಕ್ಕೆ ಹೋಗಲು ಯಾರು ತಡೆದಿದ್ದಾರೆ. ಬಿಡಿಎ ಡಿ-ನೋಟಿಫೀಕೇಶನ್ 8 ಸಾವಿರ ಕೋಟಿ ರೂ. ಅಪಾದನೆ ಸಿದ್ದರಾಮಯ್ಯರ ಮೇಲೆ ಇದೆ. ಇದೇ ಕಾರಣಕ್ಕೆ ಲೋಕಾಯುಕ್ತವನ್ನೇ ಮುಚ್ಚಿ ಎಸಿಬಿ ತೆರೆದು ತಮ್ಮ ಇಚ್ಛಾನುಸಾರ ಲೂಟಿ ಮಾಡಿದರೂ ಜೈಲಿಗೆ ಹೋಗಲಿಲ್ಲ. ಯಾಕೆಂದರೆ, ತನಿಖೆಯೇ ಆಗಲಿಲ್ಲ. ತನಿಖೆ ಮಾಡಿದ್ದರೆ ಕಾಂಗ್ರೆಸ್‍ನ ಒಂದು ಡಜನ್ ಮಂದಿ ಜೈಲು ಸೇರುತ್ತಿದ್ದರು. ಹೀಗಿದ್ದರೂ ಚುನಾವಣಾ ಟೂಲ್ ಕಿಟ್ ಆಗಿ ನಮ್ಮ ಪಕ್ಷದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆಂದು ಕಿಡಿಕಾರಿದರು.
ಬಾದಾಮಿಯಲ್ಲಿ ಹೊಸಗೌಡ ಎಂಬ ಕಂಟ್ರ್ಯಾಕ್ಟರ್ ಮೂಲಕ ಶೇ.40ರಷ್ಟು ಕಮಿಷನ್ ಪಡೆದು ಗುತ್ತಿಗೆ ನೀಡಿದ್ದಾರೆ. ಹೀಗಾದರೆ, ಸಿದ್ದರಾಮಯ್ಯ ಸಹ ಶೇ.40ರಷ್ಟು ಕಮಿಷನ್ ಒಪ್ಪಿಕೊಂಡಿದ್ದಾರೆ. 60ಜನ ಶಾಸಕರನ್ನು ಖಾಸಗಿ ವಾಹಿನಿ ಸ್ಕ್ರೀಂಗ್ ಮಾಡಿ ಕೇಬಲ ಅಳವಡಿಸುವ ಕಾಮಗಾರಿಯಿಂದ 2ರಿಂದ 3ಲಕ್ಷ ಪಡೆದುಕೊಂಡಿರುವುದು ಪತ್ತೆ ಹಚ್ಚಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಸುತ್ತಲೂ ಇರುವವರೇ ಹೆಚ್ಚಿದ್ದಾರೆ. ಈಗ ಹೇಳಿ ಭ್ರಷ್ಟಾಚಾರ ಮಾಡುತ್ತಿರುವವರು ಯಾರು? ಇದು ತನಿಖೆ ಆಗಬೇಕು. ಸಿದ್ದರಾಮಯ್ಯರ ಹರಿಶ್ಚಂದ್ರನ ಭಾಷಣ ಬೇಕಿಲ್ಲ. ಲೂಟಿ ಮಾಡಿದ್ದಕ್ಕೆ ನಿಮ್ಮನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ. ನೀವೂ ಗೆದ್ದಿದ್ದ ಚಾಮುಂಡೇಶ್ವರಿಯವರೇ ಸರ್ಟಿಫಿಕೇಟ್ ಕೊಟ್ಟಿಲ್ಲ. ಅವರೇ ತಿರಸ್ಕರಿಸಿದ್ದಾರೆ. ಬಾದಾಮಿಯಲ್ಲಿ ಸೋತಿದ್ದರೆ ಅಂದೆ ನಿಮ್ಮ ರಾಜಕೀಯ ಅಂತ್ಯವಾಗುತ್ತಿತ್ತು.
ಅಲೆಮಾರಿಯಾಗಿದ್ದಾರೆ:
ಈಗ ಅಲೆ ಮಾರಿಯಂತೆ ಓಡಾಡುತ್ತಿದ್ದಾರೆ. ಕೋಲಾರ ನೋಡಿ ಆಗಲ್ಲಾ ಎಂದು ಗೊತ್ತಾದ ಮೇಲೆ ವರುಣಗೆ ಬಂದಿದ್ದಾರೆ. ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಎರಡು ಕಡೆ ನಿಲ್ಲುತ್ತಿದ್ದಾರೆ. ಶಕ್ತಿ ಇಲ್ಲದವರೇ ಎರಡು ಕಡೆ ನಿಲ್ಲುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಎರಡು ಕಡೆ ನೋಡುತ್ತಿದ್ದಾರೆಂದು ವ್ಯಂಗ್ಯವಾಡಿದರು.
70 ವರ್ಷದಿಂದ ದಲಿತರನ್ನು ಓಟ್ ಬ್ಯಾಂಕ್ ಮಾಡಿಕೊಂಡ ಪಕ್ಷ ಸಂಪೂರ್ಣ ದಲಿತರನ್ನು ಕಳೆದುಕೊಂಡಿದೆ. ಸದ್ಯ ದಲಿತ ನಾಯಕರಲ್ಲಿ ಎಲ್ಲರನ್ನೂ ಮನವೊಲಿಸಿದ್ದೇವೆ. ಕಾಂಗ್ರೆಸ್ ಮಾಡಿರುವ ಮೋಸವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಹೀಗಾಗಿ ದಲಿತರು ನಮ್ಮ ಪರವಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲೇ ದಲಿತರ ಮತ ನಮ್ಮ ಕಡೆ ಬಂದಿದೆ. 150 ಕ್ಕೂ ಹೆಚ್ಚಿನ ಸ್ಥಾನ ನೀಡಲಿದ್ದಾರೆ. ಇನ್ನೂ ದಲಿತ ಖರ್ಗೆ, ಪರಮೇಶ್ ಮುಖ್ಯಮಂತ್ರಿ ಆಗಿದ್ದನ್ನು ಸಿದ್ದರಾಮಯ್ಯ ತಪ್ಪಿಸಿದ್ದಾರೆ. ಖರ್ಗೆ, ಪರಮೇಶ್ವರ್, ಮುನಿಯಪ್ಪರನ್ನು ಸೋಲಿಸಿದವರು ಅವರೇ ಆಗಿದ್ದಾರೆ. ದ್ರುವನಾರಾಯಣ್ ರನ್ನು ಸೋಲಿಸಿದ್ದು, ಅವರೇ ಆಗಿದ್ದಾರೆ ಎಂದು ಆರೋಪಿಸಿದರು. ದ್ರುವನಾರಾಯಣ್ ಅವರ ಸಾವಿಗೆ ಸಿದ್ದರಾಮಯ್ಯ ಹಾಗೂ ಎಚ್.ಸಿ.ಮಹದೇವಪ್ಪ ಕಾರಣ ಎಂಬುದನ್ನು ಸಾವಿನ ದಿನವೇ ಅವರನ್ನು ಜನರೇ ವಿರೋಧಿಸಿದ್ದಾರೆ. ದ್ರುವನಾರಾಯಣ್ ಅನ್ಯ ಪಕ್ಷದಲ್ಲಿದ್ದರೂ ಹದಿನೈದು ದಿನಕ್ಕೊಮ್ಮೆ ನಮ್ಮೊಟ್ಟಿಗೆ ಮಾತನಾಡಿ ಮಹದೇವಪ್ಪನವರಿಂದ ರಾಜಕೀಯ ಒತ್ತಡ ಇರುವ ಬಗ್ಗೆ ಹೇಳಿಕೊಂಡಿದ್ದರು ಎಂದು ಹೇಳಿದರು.
2008ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಖರ್ಗೆ ಕೊಳ್ಳೇಗಾಲದ ಟಿಕೇಟ್ ಅನ್ನು ದ್ರುವನಾರಾಯಣ್‍ಗೆ ಕೊಟ್ಟರು. ಬಳಿಕ ಖರ್ಗೆ ಸೂಚನೆ ಮೇರೆಗೆ ಸಿದ್ದರಾಮಯ್ಯ ಬಳಿಗೆ ಇದೇ ದ್ರುವನಾರಾಯಣ್ ಹೋದಾಗ ಇದೇ ಸಿದ್ದರಾಮಯ್ಯ ನಿನ್ನನ್ನೂ ನಾನು ಆಯ್ಕೆ ಮಾಡಿಲ್ಲ. ನಾನು ನಿನಗೆ ಬೆಂಬಲ ನೀಡಲು ಆಗಲ್ಲ ಎಂದು ನೇರವಾಗಿ ಹೇಳಿ ಕಳುಹಿಸಿದ್ದರು. ಅಂದಿನಿಂದಲೂ ಇವರಿಬ್ಬರ ನಡುವೆ ವೈಮನಸ್ಸು ಇತ್ತು ಎಂದರು. ದಲಿತರನ್ನು ಆಯ್ಕೆ ಮಾಡಿಕೊಂಡು ದಲಿತರನ್ನು ಸರ್ವನಾಶ ಮಾಡಿದ್ದಾರೆಂದರು. ಮಹದೇವಪ್ಪರಿಗೆ ನಂಜನಗೂಡು, ಮಗನಿಗೆ ತಿ.ನರಸೀಪುರ ಕ್ಷೇತ್ರ ಕೊಡಿಸಲು ಸಿದ್ದರಾಮಯ್ಯ ತಯಾರಾಗಿದ್ದರು. ಇದಕ್ಕಾಗಿಯೇ ಎಚ್.ಸಿ.ಮಹದೇವಪ್ಪ ದರ್ಶನ್ ದ್ರುವನಾರಾಯಣ್ ಮನೆಗೆ ಹೋಗಿ ಕ್ಷೇತ್ರ ತ್ಯಾಗದ ಮಾತುಗಳನ್ನಾಡಿದ್ದಾರೆ. ಹಾಗಿದ್ದರೆ ಅಲ್ಲಿ ದ್ರುವನಾರಾಯಣ್ ವರ್ಚಸ್ಸು ಇರಲಿಲ್ಲವೇ. ದ್ರುವನಾರಾಯಣ್ ಅವರ ಮೇಲೆ ರಾಜಕೀಯ ಒತ್ತಡ ಇದ್ದಿದ್ದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ ಇದು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದರು.
ಅಹಿಂದ ಸಿದ್ದರಾಮಯ್ಯ ದಲಿತರನ್ನು ಮಾತ್ರ ಮುಗಿಸಿಲ್ಲ. ಮುಸ್ಲಿಂ ಸಮುದಾಯದ ಇಬ್ರಾಹಿಂ ಜೆಡಿಎಸ್ ಗೆ ಹೋದರು, ರೋಷನ್ ಬೇಗ್ ಕಥೆ ಎನಾಯ್ತೂ? ಗುಲ್ಬರ್ಗದಲ್ಲಿ ಅಬ್ದುಲ್ ಖಾದರ್ ಶಾಧೀರ್ ಕಥೆ ಎನಾಯ್ತು? ಶರಣಗಿ ಅವರನ್ನು ಸೋಲಿಸಿದಿರಿ. ಹೆಬ್ಬಾಳದಲ್ಲಿ ಜಾಫರ್ ಶರೀಫ್ ಮೊಮ್ಮಗನನ್ನು ಸೋಲಿಸಿ ಬೈರತಿ ಸುರೇಶ್ ನಿಲ್ಲಿಸಲು ಸೋಲಿಸಿದಿರಿ. ಹೀಗೆ ಅಲ್ಪ ಸಂಖ್ಯಾತರನ್ನು ಮುಗಿಸಿದ್ದಾರೆ. ಇನ್ನೂ ಕುರುಬ ಸಮುದಾಯದ ಬೈರತಿ, ಎಚ್.ವಿಶ್ವನಾಥ್, ಶಂಕರ್ ಯಾಕೆ ಸಿದ್ದರಾಮಯ್ಯರನ್ನು ಬಿಟ್ಟು ಹೋದರು. ನಿಮ್ಮ ಸ್ವಾರ್ಥ ಸರ್ವಾಧಿಕಾರಿ ಬುದ್ದಿ ಯಾರಿಗೂ ಹಿಡಿಸದೇ ಬಿಟ್ಟು ಹೋಗಿದ್ದಾರೆ. ಸಿದ್ದರಾಮಯ್ಯ ಮೇಲೆ ಮಾತ್ರ ಬಸಪ್ಪ ಒಳಗೆ ವಿಷಪ್ಪ ಆಗಿದ್ದಾರೆ. ಈ ಕಾರಣಕ್ಕೆ ಅವರು ಎಲ್ಲಿ ನಿಂತರೂ ಗೆಲ್ಲಲ್ಲ ಮತ್ತೆ ಮುಖ್ಯಮಂತ್ರಿಯೂ ಆಗಲ್ಲ. ಅವರು ದೊಡ್ಡ ನಾಯಕರೂ ಅಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಸೋಮಸುಂದರ್, ಶಾಂತ, ನಗರ ಬಿಜೆಪಿ ವಕ್ತಾರರಾದ ಮಹೇಶ್‍ರಾಜೇ ಅರಸ್, ಕೆ.ವಸಂತ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.