ಸಿದ್ದು, ಡಿಕೆಶಿ ವಿರುದ್ಧ ಕಟೀಲ್ ವಾಗ್ದಾಳಿ

ಶಿವಮೊಗ್ಗ,ಜ.೨-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜೀನಾಮೆ ನೀಡುವುದು ಒಳ್ಳೆಯದು ಎಂದು ಡಿ.ಕೆ.ಶಿವಕುಮಾರ ಮತ್ತು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ದಿಗ್ವಿಜಯ ಸಾಧಿಸಿದೆ. ಮುಂದಿನ ವರ್ಷಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ಮನಗಂಡು ಭಯದಿಂದ ಈ ರೀತಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅವರ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಲವ್ ಜಿಹಾದ್ ಬಗ್ಗೆ ಇಂದಿನ ಕಾರ್ಯಕಾರಣಿ ಸಭೆಯಲ್ಲಿ ಚರ್ಚಿಸಲಾಗುವುದು. ಹಾಗೆಯೇ ನಾಳೆ ನಡೆಯಲಿರುವ ವಿಶೇಷ ಸಭೆಯಲ್ಲಿಯೂ ಚರ್ಚೆ ನಡೆಸಲಾಗುವುದು. ಮುಂದಿನ ಅಧಿವೇಶನದಲ್ಲಿ ನಿಶ್ಚಿತವಾಗಿ ಲವ್ ಜಿಹಾದ್ ಕಾಯ್ದೆ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ನಾಯಕರಿಗೆ ಭ್ರಮನಿರಸನವಾಗಿದೆ. ಹಾಗಾಗಿ ಯಡಿಯೂರಪ್ಪನವರ ಬಗ್ಗೆ ಟೀಕೆ ಮಾಡುವುದೇ ಅವರ ಕಾಯಕವಾಗಿದೆ ಎಂದು ಆರೋಪಿಸಿದರು.