ಸಿದ್ದು ಕಾಲದ ಪಠ್ಯ ದೋಷ ಎತ್ತಿ ತೋರಿದ ನಾಲ್ವರು ಸಚಿವರು

ಬೆಂಗಳೂರು, ಜೂ. ೨೩- ಶಾಲಾ ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಸಿದ್ಧರಾಮಯ್ಯ ಸರ್ಕಾರದಲ್ಲಿ ಪಠ್ಯ ಪರಿಷ್ಕರಣೆಯಾದಾಗ ಯಾರು,ಏಕೆ ದ್ವನಿ ಎತ್ತಲಿಲ್ಲ. ಈಗ ಮಾತ್ರ ವಿರೋಧ ಮಾಡುತ್ತಿರುವ ಹಿಂದಿನ ಮರ್ಮ ಏನು ಎಂದು ಸಚಿವ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಸಚಿವರುಗಳಾದ ಸಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜು ಇವರುಗಳ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಆರ್. ಅಶೋಕ್, ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಅಜೆಂಡಾಗಳನ್ನು ಪಠ್ಯದಲ್ಲಿ ತುರುಕಿದ್ದರು. ಮನ ಬಂದಂತೆ ಪಠ್ಯಗಳಲ್ಲಿ ವಿಚಾರಗಳನ್ನು ಅಳವಡಿಸಿದ್ದರು. ಆಗ ಯಾರೂ ಮಾತನಾಡಲಿಲ್ಲ. ಆಗಿದ್ದ ತಪ್ಪುಗಳನ್ನು ಸರಿಪಡಿಸಿದ್ದಕ್ಕೆ ವಿವಾದ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಪಠ್ಯ ಚರ್ಚೆಗೆ ಒಳಗಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಈ ಹಿಂದೆ ತುರುಕಲಾಗಿದ್ದ ವಿಚಾರಗಳು, ಕೈಬಿಡಲಾಗಿದ್ದ ಅಂಶಗಳು, ಈಗ ಬಿಜೆಪಿ ಸರ್ಕಾರ ಪರಿಷ್ಕರಿಸಿರುವ ಅಂಶಗಳು, ಸರಿಪಡಿಸಿರುವ ತಪ್ಪುಗಳು ಎಲ್ಲವನ್ನು ಸಾಕ್ಷ್ಯ ಸಮೇತ ಎಳೆ ಎಳೆಯಾಗಿ ಬಿಚ್ಚಿಟ್ಟ ಸಚಿವರು, ಈ ಹಿಂದೆ ಹಿಂದೂ ಮಹಾಸಾಗರ ಎಂಬ ಹೆಸರನ್ನೇ ಕೈಬಿಡಲಾಗಿತ್ತು. ರಾಮ, ಈಶ್ವರ, ಶಿವಾಜಿ ಇವೆಲ್ಲವನ್ನೂ ಕೈ ಬಿಟ್ಟಿದ್ದರು. ಇವೆಲ್ಲಾ ಅವರಿಗೆ ಇಷ್ಟವಾಗದ ಹೆಸರುಗಳು ಎಂದರು.
ಹಿಂದೆ ವಿಶ್ವೇಶ್ವರಹೆಗಡೆ ಕಾಗೇರಿ ಅವರು ಶಿಕ್ಷಣ ಸಚಿವರಾಗಿದ್ದಾಗ ಪಠ್ಯ ಪುಸ್ತಕ ಮಾಡಲಾಗಿತ್ತು. ನಂತರ ಬಂದ ಸಿದ್ಧರಾಮಯ್ಯ ಸರ್ಕಾರ ತಮಗೆ ಬೇಕಾದ ವಿಚಾರಗಳನ್ನು ತುರುಕಲು ಬರಗೂರು ಸಮಿತಿ ರಚಿಸಿ ಪಠ್ಯ ಪರಿಷ್ಕರಣೆ ಮಾಡಿದ್ದರು. ಬರಗೂರು ಸಮಿತಿ ನಾಡಪ್ರಭು ಕೆಂಪೇಗೌಡರ ಹೆಸರನ್ನೇ ಕೈ ಬಿಟ್ಟಿತ್ತು. ನಾವು ಕೆಂಪೇಗೌಡರ ಬಗ್ಗೆ ಪಠ್ಯ ಸೇರಿಸಿದ್ದೇವೆ ಎಂದರು.
ಸಿದ್ಧರಾಮಯ್ಯ ಕಾಲದಲ್ಲಿ ಬೆಂಗಳೂರು ಪರಿಚಯಿಸುವ ಪಾಠದಲ್ಲೂ ನಾಡಪ್ರಭು ಕೆಂಪೇಗೌಡರ ಉಲ್ಲೇಖ ಇರಲಿಲ್ಲ. ನಾಡಿನ ಅಭಿಮಾನದ ಗೀತೆ ಚೆಲುವ ಕನ್ನಡ ನಾಡಿದು ಗೀತೆಯನ್ನು ತೆಗೆಯಲಾಗಿತ್ತು. ಏರುತ್ತಿಹುದು ಹಾರುತಿವುದು ನಮ್ಮ ಬಾವುಟ ಪದ್ಯವನ್ನು ತೆಗೆಯಲಾಗಿತ್ತು. ಆಗ ಯಾರೂ ಪ್ರಶ್ನೆ ಮಾಡಲಿಲ್ಲ ಎಂದರು.
ಸಿದ್ಧರಾಮಯ್ಯ ಅವರಿಗೆ ಟಿಪ್ಪು ಎಂದರೆ ಮೈ ಮೇಲೆ ಬಂದು ಬಿಡುತ್ತದೆ. ಟಿಪ್ಪುವನ್ನು ಮೈಸೂರು ಹುಲಿ ಎಂದು ವೈಭವೀಕರಿಸಿ, ಮೈಸೂರು ಒಡೆಯರ್ ರವರನ್ನು ಕಡೆಗಣನೆ ಮಾಡಲಾಯಿತು. ಈ ಮೂಲಕ ಸಿದ್ಧರಾಮಯ್ಯ ಕಾಲದಲ್ಲಿ ಮೈಸೂರು ಒಡೆಯರ್ ರವರಿಗೆ ಅಪಮಾನ ಮಾಡಲಾಗಿದೆ ಎಂದರು.
ಮಥುರ, ಶ್ರೀಕೃಷ್ಣಮಂದಿರ, ಸೋಮನಾಥ ದೇವಾಲಯದ ಅಂಶ ಕೈಬಿಡಲಾಗಿದೆ. ಭಾರತದ ಮಹಾರಾಜರ ಕೊಡುಗೆಗಳನ್ನು ಕಡೆಗಣನೆ ಮಾಡಲಾಗಿದೆ. ಮರೆಯಲಾಗದ ಸಾಮ್ರಾಜ್ಯ ಎಂಬ ಪಾಠದ ಹೆಸರು ಮತ್ತು ಕೆಲವು ಅಂಶಗಳಿಗೆ ಕತ್ತರಿ ಹಾಕಲಾಗಿದೆ. ಗಾಂಧೀಜಿ ಭಾರತ-ಪಾಕಿಸ್ತಾನ ವಿಭಜನೆ ನಂತರ ಮತೀಯ ಗಲಭೆ ನಿಯಂತ್ರಿಸಲು ಕೊಲ್ಕಾತ್ತಾದಲ್ಲಿ ಗೀತೆಯನ್ನು ಪಠಿಸುತ್ತಿದ್ದರು ಎಂಬ ಅಂಶಕ್ಕೂ ಕತ್ತರಿ ಹಾಕಲಾಗಿದೆ ಎಂದು ಅಶೋಕ್ ಸುದ್ದಿಗೋಷ್ಠಿಯಲ್ಲಿ ಸಾಕ್ಷ್ಯಗಳ ಸಮೇತ ವಿವರಿಸಿದರು ಮತೀಯ ಯುದ್ಧಗಳ ಕುರಿತಾದ ಅಂಶಗಳಿಗೆ ಸಿದ್ಧರಾಮಯ್ಯ ಕಾಲದಲ್ಲಿ ಕತ್ತರಿ ಹಾಕಿ, ಶಿವಾಜಿ ಮಹಾರಾಜರ ಉಲ್ಲೇಖಕ್ಕೂ ಕತ್ತರಿ ಹಾಕಲಾಗಿತ್ತು. ಚಂಗೀಸ್ತಾನ್ ಮತ್ತು ಥೈಮೂರ ದಾಳಿಗಳ ಅಂಶಗಳನ್ನು ತೆಗೆಯಲಾಗಿತ್ತು. ರಜಪೂತರ ಗುಣಧರ್ಮಗಳನ್ನು ಕೈಬಿಟ್ಟು ಮೊಘಲರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಸರ್ವಾಧಿಕಾರದಿಂದ ರಾಷ್ಟ್ರ ಪ್ರೀತಿ ಹೆಚ್ಚುತ್ತದೆ ಎಂಬ ಅಂಶವನ್ನು ಸಮಾಜ ವಿಜ್ಞಾನ ಪಾಠದಲ್ಲಿ ಸೇರಿಸಲಾಗಿದೆ. ಆಗ ಯಾರೂ ಮಾತನಾಡಲಿಲ್ಲ ಎಂದರು.
ಈಗಲಾದರೂ ಕಾಂಗ್ರೆಸ್ ಮತ್ತು ನಮ್ಮ ಸಿದ್ಧರಾಮಯ್ಯ ಇದಕ್ಕೆಲ್ಲಾ ಉತ್ತರ ಕೊಡುತ್ತಾರಾ ಎಂದು ಪ್ರಶ್ನಿಸಿದ್ದರು.
ಬಿಜೆಪಿ ಸರ್ಕಾರ ತಪ್ಪುಗಳನ್ನು ಸರಿಪಡಿಸಿದ್ದಕ್ಕೆ ವಿವಾದ ಮಾಡಲಾಗುತ್ತಿದೆ. ಕೆಲವು ಸಾಹಿತಿಗಳು ಹಿಂದೂ ಮಲಗಿದರೆ ದೇಶ ಮಲಗೀತು ಎಂಬ ಭ್ರಮೆಯಲ್ಲಿದ್ದಾರೆ. ಹೆಡಗೆವಾರ್ ವಿಚಾರ ಸೇರಿಸಿರುವುದು ಚರ್ಚೆಗೆ ಒಳಗಾಗಿದೆ. ನಾವೆಲ್ಲಾ ಸ್ವಾಮಿ ವಿವೇಕಾನಂದರ ಅನುಯಾಯಿಗಳು ಎಂದರು.
ಸಿದ್ಧರಾಮಯ್ಯ ಕಾಲದಲ್ಲಿ ಕುವೆಂಪು ಅವರ ಗದ್ಯ, ಪದ್ಯಪೈಕಿ ಒಂದನ್ನು ತೆಗೆದು ಹಂಸಲೇಖ ಅವರ ಬಣ್ಣದ ಬುಗುರಿ ಪದ್ಯ ಸೇರಿಸಲಾಯಿತು. ಈಗ ಕಾಂಗ್ರೆಸ್‌ನವರು ಕುವೆಂಪು ಬಗ್ಗೆ ನಮ್ಮ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈಗ ನಮ್ಮ ಸರ್ಕಾರ ಕುವೆಂಪು ಅವರ ೧೦ ಗದ್ಯ-ಪ್ದ್ಯವ್ನು ಪಠ್ಯದಲ್ಲಿ ಸೇರಿಸಿದೆ ಎಂದರು.ಭಗತ್‌ಸಿಂಗ್, ನಾರಾಯಣಗುರು ಪಾಠವನ್ನು ನಾವು ತೆಗೆದಿದ್ದೇವೆ ಎಂದು ಸುಳ್ಳು ಸುದ್ದಿ ಹರಡಿಸಿದರು. ನಮ್ಮ ಸರ್ಕಾರ ಯಾವುದನ್ನು ತೆಗೆದಿಲ್ಲ. ತಪ್ಪುಗಳನ್ನು ಹುಡುಕುತ್ತಿದ್ದಾರೆ ಅಷ್ಟೇ ಎಂದರು.
ನಮ್ಮ ಸರ್ಕಾರ ಪೋರ್ಚಿಗೀಸರ ವಿರುದ್ಧ ಹೋರಾಡಿದ ಕನ್ನಡ ರಾಣಿ ಚನ್ನಬೈರಾದೇವಿ, ವಿವೇಕಾನಂದರ ಪಾಠ ಸೇರಿಸಿದೆ ಎಂದರು
ಸಿದ್ಧರಾಮಯ್ಯ ಕಾಲದಲ್ಲಿ ಸಿಂಧು ಸಂಸ್ಕೃತಿ ಕುರಿತ ಪಾಠ, ನಿಟ್ಟೂರು ಶ್ರೀನಿವಾಸರಾಯರ ಪಾಠ, ಏಣಗಿ ಬಾಳಪ್ಪ ಅವರ ಪಾಠ ತೆಗೆದು ಹಾಕಿದ್ದು ಏಕೆ ಎಂದು ಸಿದ್ಧರಾಮಯ್ಯ ಉತ್ತರಿಸಲಿ ಎಂದು ಅವರು ಒತ್ತಾಯಿಸಿದರು.
ಸುಖಾಸುಮ್ಮನೆ ಶಾಲಾ ಪಠ್ಯ ಪರಿಷ್ಕರಣೆ ಬಗ್ಗೆ ಕಾಂಗ್ರೆಸ್ ವಿನಾ ಕಾರಣ ವಿವಾದ ಮಾಡುತ್ತಿದೆ. ಇದಕ್ಕೆ ಕೆಲವು ಸಾಹಿತಿಗಳು ಕೈ ಜೋಡಿಸಿದ್ದಾರೆ ಇದು ಸರಿಯಲ್ಲ ಎಂದು ಸಚಿವ ಅಶೋಕ್ ಹೇಳಿದರು.
ದೇವೇಗೌಡರಿಗೆ ಉತ್ತರ ದೇವೇಗೌಡರು ನಮ್ಮ ಹಿರಿಯರು. ನಮ್ಮ ಜನಾಂಗದ ನಾಯಕರು. ಮುಖ್ಯಮಂತ್ರಿಗಳಿಗೆ ದೇವೇಗೌಡರು ಬರೆದಿರುವ ಪತ್ರಕ್ಕೆ ನಾಳೆ ಮುಖ್ಯಮಂತ್ರಿಗಳು ಉತ್ತರ ತಲುಪಿಸುತ್ತಾರೆ .ನಾನು ಇವತ್ತು ಕೆಲವು ಸಾಹಿತಿಗಳು ಎತ್ತಿದ ವಿಚಾರಕ್ಕೆ ಉತ್ತರ ಕೊಟ್ಟಿದ್ದೇನೆ. ನಾಳೆ ಮುಖ್ಯಮಂತ್ರಿಗಳು ರೋಹಿತ್ ಚಕ್ರತೀರ್ಥ ಕುರಿತು ದೇವೇಗೌಡರ ಆಕ್ಷೇಪಕ್ಕೆ ಉತ್ತರ ಕೊಡುತ್ತಾರೆ ಎಂದರು.
ಪಠ್ಯದಲ್ಲಿ ತಪ್ಪುಗಳಾಗಿದ್ದರೆ ಸರಿಪಡಿಸುವ ಅಂಶಗಳನ್ನು ಇನ್ನೊಂದು ವಾರದಲ್ಲಿ ಸೇರ್ಪಡೆ ಮಾಡುತ್ತೇವೆ ಎಂದು ಅಶೋಕ್ ಹೇಳಿದರು.
ದೇವೇಗೌಡರಿಗೆ ಶಿಕ್ಷಣ ಸಚಿವರು ಈಗಾಗಲೇ ಅವರನ್ನು ಭೇಟಿ ಮಾಡಿ ಮಾಹಿತಿ ಕೊಟ್ಟಿದ್ದಾರೆ. ನಾಳೆ ಮುಖ್ಯಮಂತ್ರಿಗಳು ಪತ್ರದ ಮುಖೇನ ಉತ್ತರ ನೀಡುತ್ತಾರೆ. ನಾವೇನೂ ಯಾವುದೇ ತಪ್ಪುಗಳನ್ನು ಮಾಡಿಲ್ಲ. ಕಾಂಗ್ರೆಸ್‌ನವರೇ ಮಾಹಿತಿಗಳನ್ನು ತಿರುಚಿದ್ದಾರೆ ಎಂದರು.

ಪರಿಷ್ಕೃತ ಪಠ್ಯ ಪುಸ್ತಕವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹರಿದು ಹಾಕುವ ಮೂಲಕ ನಾಡಪ್ರಭು ಕೆಂಪೇಗೌಡರಿಗೆ ಅವಮಾನ ಮಾಡಿದ್ದಾರೆ ಎಂದು ಆರ್. ಅಶೋಕ್ ಆರೋಪಿಸಿದರು.
ಡಿ.ಕೆ. ಶಿವಕುಮಾರ್ ಅವರು ಪಠ್ಯ ಪುಸ್ತಕ ಹರಿದು ಹಾಕಬಾರದಿತ್ತು ಯಾಕೆಂದರೆ ಅದರಲ್ಲಿ ನಾಡಪ್ರಭು ಕೇಂಪೇಗೌಡರ ಪಾತ್ರದ ಉಲ್ಲೇಖ ಇತ್ತು ಎಂದರು.
ನಾಡಪ್ರಭು ಕೆಂಪೇಗೌಡರ ಇದ್ದ ಪುಸ್ತಕವನ್ನು ಶಿವಕುಮಾರ್ ಹರಿದು ಹಾಕಿದ್ದು ಎಷ್ಟು ಸರಿ ಎಂದು ಅಶೋಕ್ ಪ್ರಶ್ನಿಸಿದರು.