ಸಿದ್ದು ಕಾಂಗ್ರೆಸ್ ಒಳಜಗಳ ಸರಿಪಡಿಸಲಿ :ಬಿಸಿಪಾ ತಿರುಗೇಟು


ಕೊಪ್ಪಳ,ನ.1:ಸಿದ್ದರಾಮಯ್ಯ ಮೊದಲು ಕಾಂಗ್ರೆಸ್ ಪಕ್ಷದೊಳಗಿನ ಒಳಜಗಳ ಸರಿಪಡಿಸಿಕೊಳ್ಳಲಿ.ಆನಂತರ ಬಿಜೆಪಿ ಬಗ್ಗೆ ಮಾತನಾಡಲಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಇಲ್ಲದಿದ್ದರೆ ಮೈತ್ರಿ ಸರ್ಕಾರದಿಂದ ಬಿಜೆಪಿಗೆ ಹೋದ 17 ಜನರ ಅಸ್ತಿತ್ವವಿರುವುದಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್, ಸಿದ್ದರಾಮಯ್ಯಗೆ ಅದ್ಯಾಕೆ ಬಿಜೆಪಿ ಬಗ್ಗೆ ಅಷ್ಟು ತಲೆಕೆಡಿಸಿ ಕೊಳ್ಳುತ್ತಾರೆಯೋ ಗೊತ್ತಾಗುತ್ತಿಲ್ಲ.ಸಿದ್ದರಾಮಯ್ಯ ಮೊದಲು ಅವರ ಪಕ್ಷವನ್ನು ಸರಿಯಾಗಿ ನೋಡಿಕೊಳ್ಳಲಿ.

ಸಿದ್ದರಾಮಯ್ಯಗೆ ಡಿ.ಕೆ‌‌.ಶಿವಕುಮಾರ್ ಅವರನ್ನು ಸಂಬಾಳಿಸಿಕೊಂಡು ಹೋದರೆ ಸಾಕಾಗಿದೆ.ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸಬೇಕು ಎಂದಿದ್ದರೆ,ಸಿದ್ದರಾಮಯ್ಯ ಡಿಕೆಶಿಯನ್ನು ರಾಜಕೀಯವಾಗಿ ಮುಗಿಸಬೇಕೆಂದಿದ್ದಾರೆ.
ಈ ನಡುವೆ ಇಬ್ಬರು ಜುಗಲ್ ಬಂದಿಯಂತೆ ಕೂತು ಭಾಷಣ ಮಾಡುತ್ತಾರೆ.ಕಾಂಗ್ರೆಸ್ ತಟ್ಟೆಯಲ್ಲಿಯೇ ಕತ್ತೆ ಬಿದ್ದಿದೆ ಅದನ್ನು ನೋಡುವುದು ಬಿಟ್ಟು ಸಿದ್ದರಾಮಯ್ಯ,ಇನ್ನೊಬ್ಬರ ತಟ್ಟೆಯಲ್ಲಿನ ನೊಣ ಓಡಿಸಲು ಹೊರಟಿದ್ದಾರೆ.ಸಿದ್ದರಾಮಯ್ಯಗೆ ಈ ನಡುವೆ ಬಿಜೆಪಿ ಬಗ್ಗೆ ಬಹಳ ಆಸಕ್ತಿ ಬಂದಂತಿದೆ.ಸಿದ್ದರಾಮಯ್ಯ ಬಿಜೆಪಿಗೆ ಬಂದರೆ ಅವರನ್ನು ಹೃದಯಪೂರ್ವಕ ಸ್ವಾಗತಿಸುವುದಾಗಿ ಅವರು ಹೇಳಿದರು.
ಇನ್ನೂ ಎರಡುವರೆ ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ.ಆ ನಂತರ ಚುನಾವಣೆ ನಡೆದಾಗ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ನಿಗದಿಯಾಗಲಿದೆ.ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಪಕ್ಷದ ವರಿಷ್ಠರು ಕ್ರಮಕೈಗೊಳ್ಳುತ್ತಾರೆ ಎಂದು ತಿಳಿಸಿದರು.