ಸಿದ್ದು ಆರೋಪಕ್ಕೆ ಶೆಖಾವತ್ ಆಕ್ರೋಶ

ನವದೆಹಲಿ, ಅ. ೩೦- ನೀರಾವರಿ ವಿಚಾರ ಸೇರಿದಂತೆ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಸೂಕ್ತ ಅನುದಾನ ಸಿಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಡಿರುವ ಆರೋಪಕ್ಕೆ ಕಿಡಿಕಾರಿರುವ ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್, ಸತ್ಯದ ಗೋರಿ ಕಟ್ಟಿ ಸುಳ್ಳಿನ ವಿಜೃಂಭಣೆ ಮಾಡುವಾಗ ಕನಿಷ್ಠ ಆತ್ಮಸಾಕ್ಷಿಯನ್ನಾದರೂ ಪ್ರಶ್ನಿಸಿಕೊಳ್ಳಿ. ಇಲ್ಲವಾದರೆ ಸುಳ್ಳಿನ ಉಪಾಸನೆಯೇ ನಿಮ್ಮ ನಿತ್ಯ ಕರ್ಮವೆಂದು ಕರ್ನಾಟಕದ ಜನ ನಿಮ್ಮ ಬಗ್ಗೆ ಕನಿಕರ ಹಾಗೂ ತಿರಸ್ಕಾರ ತೋರಬಹುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಟೀಕೆ ಪ್ರಹಾರ ನಡೆಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹೆಸರನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶಖಾವತ್, ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಹರಡುವುದು ಕಾಂಗ್ರೆಸ್ಸಿಗರಿಗೆ ಅಂಟಿರುವ ಚಟ ಎಂದು ನಮ್ಮೆಲ್ಲರಿಗೂ ತಿಳಿದಿದೆ. ಆದರೆ ಮುಖ್ಯಮಂತ್ರಿ ಖುದ್ಧು ತಪ್ಪು ಮಾಹಿತಿಗಳನ್ನು ಬಿತ್ತಿ ಜನಮಾನಸವನ್ನು ಹಾಳುಗೆಡವಲು ಮುಂದಾಗುತ್ತಾರೆ ಎಂದು ನಾವು ಭಾವಿಸಿರಲಿಲ್ಲ ಎಂದು ಶೇಖಾವತ್ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಮೇಕೆದಾಟು ವಿಚಾರವಾಗಲೀ, ಕಳಸ-ಬಂಡೂರಿ ವಿಚಾರದಲ್ಲಾಗಲಿ, ಕೇಂದ್ರ ಪ್ರಾಯೋಜಿತ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ವಿಚಾರದಲ್ಲಾಗಲೀ ಕೇಂದ್ರ ಯಾವುದೇ ತಪ್ಪಾಗಲಿ, ಅನ್ಯಾಯವಾಗಲಿ ಮಾಡಿಲ್ಲ ಎಂದು ಶೆಖಾವತ್ ಅವರು ಅಂಕಿ ಅಂಶಗಳ ಸಮೇತ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.
ಮೇಕೆದಾಟು ಯೋಜನೆಯ ಸ್ಥಿತಿಗತಿ ಹಾಗೂ ವಾಸ್ತವಾಂಶ ಏನೆಂಬುದು ಸಿದ್ಧರಾಮಯ್ಯನವರೇ ನಿಮಗೆ ಚೆನ್ನಾಗಿ ತಿಳಿದಿದೆ. ನಿಮ್ಮ ಬ್ರೀಫಿಂಗ್ ತಂಡ ನೀಡಿದ ಅರ್ಧಂಬರ್ಧ ಮಾಹಿತಿ ಆಧರಿಸಿ ನೀವು ತಪ್ಪು ಮಾಹಿತಿಗಳ ಸರಣಿಯನ್ನೇ ಹರಿ ಬಿಟ್ಟಂತೆ ತೋರುತ್ತದೆ. ಹಾಗಾಗಿ ವಾಸ್ತವವನ್ನು ನಾನೇ ಹೇಳಬೇಕಾದ ಪರಿಸ್ಥಿತಿ ಬಂದಿದೆ. ಮೊದಲನೇಯದಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಿದ ಹಲವು ಸಭೆಗಳಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ಕುರಿತು ಅಜೆಂಡಾ ಸೇರಿಸಲಾಗಿತ್ತು. ಆದರೆ ಈ ಕಾರ್ಯಸೂಚಿ ಬಗ್ಗೆ ನೆರೆ ರಾಜ್ಯಗಳ ನಡುವೆ ಒಮ್ಮತ ಮೂಡದೇ ಇರುವುದರಿಂದ ಚರ್ಚೆಗೆ ಸಾಧ್ಯವಾಗಿಲ್ಲ. ಇದು ಕೇಂದ್ರದ ತಪ್ಪಲ್ಲ ಎಂದು ಅವರು ಟ್ವೀಟರ್‌ನಲ್ಲಿ ಹೇಳಿದ್ದಾರೆ.
ಕಳಸ ಮತ್ತು ಬಂಡೂರಿ ನಾಲಾ ಯೋಜನೆಯ ಡಿಪಿಆರ್‌ಗಳನ್ನು ಈಗಾಗಲೇ ಕೇಂದ್ರ ಜಲ ಆಯೋಗ ಕೆಲವು ಷರತ್ತುಗಳೊಂದಿಗೆ ಅನುಮೋದಿಸಿದೆ ಮತ್ತು ಅದರ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಈಗಾಗಲೇ ತಿಳಿಸಲಾಗಿದೆ. ಈ ಮಾಹಿತಿಯನ್ನು ನೀವು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದರಲ್ಲವೇ ಎಂದು ಕೇಂದ್ರ ಜಲಶಕ್ತಿ ಸಚಿವರು ಟ್ವೀಟ್‌ನಲ್ಲಿ ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಪ್ರಧಾನ ಸಿಂಚಾಯಿ ಯೋಜನೆ-ತ್ವರತಿ ನೀರಾವರಿ ಕಾರ್ಯಕ್ರಮದಡಿಯಲ್ಲಿ ಕರ್ನಾಟಕದ ಐದು ಯೋಜನೆಗಳಲ್ಲಿ ಮೂರು ಪೂರ್ಣಗೊಂಡಿವೆ. ಎರಡು ಕಾಮಗಾರಿ ಚಾಲನೆಯಲ್ಲಿದೆ. ಈ ಯೋಜನೆಗಾಗಿ ಕೇಂದ್ರದ ಪಾಲಿನ ೧೨೩೮.೩೦ ಕೋಟಿ ರೂ.ಗಳ ಪೈಕಿ ೧೧೯೦.೦೫ ಕೋಟಿ ರೂ.ಗಳು ಈಗಾಗಲೇ ಬಿಡುಗಡೆಯಾಗಿದೆ. ಈ ವಿಚಾರ ಹಣಕಾಸು ಇಲಾಖೆಯಿಂದ ನಿಭಾಯಿಸುತ್ತಿರುವ ನಿಮ್ಮ ಗಮನಕ್ಕೆ ಬಾರದೆ ಇರುವುದು ಚ್ಯೋದ್ಯವಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಅಟಲ್ ಭೂಜಲ ಯೋಜನೆಯಡಿಯಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಈಗಾಗಲೇ ೬೨೨೯.೫೪ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ, ೨೦೨೩ರ ಕಳೆದ ಅಕ್ಟೋಬರ್ ೨೮ ರವರೆಗೆ ಕೇವಲ ೨೨೪.೦೫ ಕೋಟಿ ರೂ. ಮಾತ್ರ ಬಳಕೆ ಮಾಡಿದ್ದೀರಿ ಎಂದು ಶೆಖಾವತ್ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.