ಸಿದ್ದು ಅವಧಿಯಲ್ಲೇ ಬಿಟ್ ಕಾಯಿನ್ ದಂಧೆ : ಬಿಜೆಪಿ ಆರೋಪ

ಬೆಂಗಳೂರು, ನ. ೧೨- ರಾಜ್ಯದಲ್ಲಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಬಿಟ್ ಕಾಯಿನ್ ದಂಧೆ ನಡೆದಿದೆ ಎಂದು ರಾಜ್ಯ ಬಿಜೆಪಿ ಟ್ವೀಟರ್‌ನಲ್ಲಿ ಆರೋಪಿಸಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಬಿಟ್ ಕಾಯಿನ್ ದಂಧೆ ನಡೆದಿದೆ. ಈ ದಂಧೆಯ ಆರೋಪಿಯು ಯುವ ಕಾಂಗ್ರೆಸ್‌ನ ನಿಯೋಜಿತ ಅಧ್ಯಕ್ಷ ಮಹಮದ್ ನಲ್ಪಾಡ್ ಹಾಗೂ ಮಾಜಿ ಸಚಿವ ಲಮಾಣಿ ಪುತ್ರ ದರ್ಶನ್ ನಡುವೆ ಅವ್ಯವಹಾರ ನಡೆಸಿರುವ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಉಲ್ಲೇಖವಿದೆ ಎಂದು ಬಿಜೆಪಿ ಟ್ವೀಟರ್‌ನಲ್ಲಿ ಹೇಳಿದೆ.
ಬಿಟ್ ಕಾಯಿನ್ ದಂಧೆಯ ಆರೋಪಿ ಶ್ರೀಕಿಯನ್ನು ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಂಧಿಸಿ ಬಿಡುಗಡೆಗೊಳಿಸಲಾಗಿತ್ತು. ಅದೇ ಸಿದ್ಧರಾಮಯ್ಯ ಈಗ ಆರೋಪಿಗೆ ಕಾಂಗ್ರೆಸ್ ನಾಯಕರ ಜತೆ ಇರುವ ಸಂಬಂಧವನ್ನು ಉಲ್ಲೇಖ ಮಾಡದೆ ಬಿಜೆಪಿ ವಿರುದ್ಧ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಬಿಟ್ ಕಾಯಿನ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿರುವ ಬಿಜೆಪಿ, ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳಿದ್ದರೆ ಸಿದ್ಧರಾಮಯ್ಯ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದೆ.