ಬೆಂಗಳೂರು, ಮಾ.೬- ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಬರೀ ಕಾಫೀ, ತಿಂಡಿ, ಬಿಸ್ಕೆಟ್ ಗಳ ಹೆಸರಿನಲ್ಲಿ ೨೦೦ ಕೋಟಿ ಲೂಟಿ ಮಾಡಿದ್ದು, ಇಂತಹ ಗಂಭೀರ ಪ್ರಕರಣವನ್ನು ಸಿಐಡಿ ಅಥವಾ ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದ ಮಲ್ಲೇಶ್ವರಂ ಬಿಜೆಪಿ ಕಚೇರಿ ಇಂದು ದಾಖಲೆ ಬಿಡುಗಡೆ ಮಾಡಿದ ಅವರು, ಸಿದ್ಧರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದ ಅವಧಿಯಲ್ಲಿ ಕೇವಲ ಕಾಫೀ, ತಿಂಡಿ, ಬಿಸ್ಕೆಟ್ ಗಳ ಹೆಸರಿನಲ್ಲಿ ೨೦೦ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಿರುವ ಬೃಹತ್ ಹಗರಣ ಬಯಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅವರ ಕಚೇರಿಯ ಸಿಬ್ಬಂದಿವರ್ಗ ಹಾಗೂ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಯ ಅಂದಿನ ಅಧಿಕಾರಿಗಳು ಭಾಗಿಗಳಾಗಿ ನಡೆಸಿರುವ ಬೃಹತ್ ಹಗರಣ ಇದಾಗಿದ್ದು, ೨೦೧೩-೧೪ ರಿಂದ ೨೦೧೭-೧೮ ರವರೆಗಿನ ೦೫ ವರ್ಷಗಳ ಅವಧಿಯಲ್ಲಿ ಹೊರಗಿನಿಂದ ಬರುವಂತಹ ಅತಿಥಿಗಳ, ಗಣ್ಯರ ಉಪಚಾರ ಕಾರ್ಯಗಳ ಹೆಸರಿನಲ್ಲಿ ೨೦೦ ಕೋಟಿ ರೂಪಾಯಿ ಗಳಿಗೂ ಹೆಚ್ಚು ಹಣ ಲೂಟಿ ಮಾಡಲಾಗಿದೆ ಎಂದು ಆಪಾದಿಸಿದರು.
ಈ ೫ ವರ್ಷಗಳ ಅವಧಿಯಲ್ಲಿ ಕೇವಲ ಮುಖ್ಯಮಂತ್ರಿಗಳ ಕಚೇರಿಯ ಕಾರ್ಯಗಳಿಗೆ ಕಾಫೀ, ಟೀ, ತಿಂಡಿ, ಸ್ನಾಕ್ಸ್ – ಉಪಹಾರ ಪೂರೈಕೆ ಕಾರ್ಯಗಳಿಗೆಂದು ವೆಚ್ಛ ಮಾಡಿರುವ ಒಟ್ಟು ಮೊತ್ತ ೨೦೦,೬೨,೯೩,೦೨೭ ರೂ. ಆಗಿರುವುದು ನಂಬಲಸಾಧ್ಯವಾದರೂ ಸಹ ಇದು ಸತ್ಯ ಎಂದು ಟೀಕಿಸಿದರು.
ದಿನಕ್ಕೆ೧೧ ಲಕ್ಷ: ೫ ವರ್ಷಗಳಲ್ಲಿನ ೪೧೦ ರಜಾ ದಿನಗಳನ್ನೂ ಸೇರಿಸಿಕೊಂಡರೆ ಪ್ರತಿಯೊಂದು ದಿನಕ್ಕೆ ಸರಾಸರಿ ೧೧ ಲಕ್ಷ ರೂಪಾಯಿ ವೆಚ್ಛವಾಗಿದೆ. ೪೧೦ ರಜಾ ದಿನಗಳನ್ನು ಹೊರತುಪಡಿಸಿದರೆ ಪ್ರತಿಯೊಂದು ದಿನಕ್ಕೆ ಸರಾಸರಿ ೧೪ ಲಕ್ಷ ರೂಪಾಯಿ ವೆಚ್ಛ ಆಗಿದೆ ಎಂದು ರಮೇಶ್ ತಿಳಿಸಿದರು.
ಇನ್ನೂ, ೫ ವರ್ಷಗಳ ಅವಧಿ ಎಂದರೆ ಒಟ್ಟು ೧,೮೨೫ ದಿನಗಳು. ೫೨ ಭಾನುವಾರಗಳು, ೧೨ ಎರಡನೇ ಶನಿವಾರಗಳು ಮತ್ತು ೨೦ ಕ್ಕೂ ಹೆಚ್ಚು ಸರ್ಕಾರೀ ರಜಾ ದಿನಗಳು ಸೇರಿದಂತೆ ಪ್ರತೀ ವರ್ಷಕ್ಕೆ ೮೨ ದಿನಗಳಂತೆ, ಐದು ವರ್ಷಗಳಿಗೆ ಸುಮಾರು ೪೧೦ ದಿನಗಳು ಸರ್ಕಾರೀ ರಜಾ ದಿನಗಳು ಆಗುತ್ತವೆ.
ಆದರೂ, ಸಿದ್ಧರಾಮಯ್ಯನವರ ಅವಧಿಯಲ್ಲಿ ಮುಖ್ಯಮಂತ್ರಿಗಳ ಕಚೇರಿಯು ಒಂದು ದಿನವೂ ರಜೆಯಿಲ್ಲದೆ ಎಲ್ಲಾ ಭಾನುವಾರಗಳು, ಎರಡನೇ ಶನಿವಾರಗಳು ಮತ್ತು ಎಲ್ಲಾ ಸರ್ಕಾರೀ ರಜಾ ದಿನಗಳಲ್ಲೂ ಕಾರ್ಯ ನಿರ್ವಹಿಸಿದೆಯೆಂದು ಭಾವಿಸಿದರೂ ಸಹ ೦೫ ವರ್ಷಗಳ ಅವಧಿಯ ಒಟ್ಟು ೧,೮೨೫ ದಿನಗಳಲ್ಲಿ ಸಿದ್ಧರಾಮಯ್ಯನವರ ಅಧಿಕೃತ ಕಛೇರಿಯ ಸಭೆಗಳಲ್ಲಿ ಮತ್ತು ಅತಿಥಿ ಗಣ್ಯರ ಉಪಚಾರಗಳ ಹೆಸರಿನಲ್ಲಿ ಕಾಫೀ, ತಿಂಡಿ, ಸ್ನಾಕ್ಸ್ , ಉಪಹಾರಗಳಿಗೆಂದು ಪ್ರತೀ ದಿನವೊಂದಕ್ಕೆ ಸರಾಸರಿ ೧೦,೯೯,೩೩೯ ರೂ. ಗಳನ್ನು ವೆಚ್ಛ ಮಾಡಲಾಗಿದೆ ಎಂದು ಆರೋಪಿಸಿದರು.
ಅಲ್ಲದೆ, ಇದು ಕೇಳಲು ಹಾಸ್ಯ ಪ್ರಸಂಗದಂತಿದ್ದರೂ ಸಹ ದಾಖಲೆಗಳು ಅಸಲೀ ಸತ್ಯವನ್ನು ಬಿಚ್ಚಿಡುತ್ತಿವೆ.
ಈ ನಂಬಲಸಾಧ್ಯವಾದಂತಹ ದಾಖಲೆಗಳಿಂದ ೫ ವರ್ಷಗಳಲ್ಲಿ ನಕಲಿ ದಾಖಲೆಗಳನ್ನು ತಯಾರಿಸಿ ಒಟ್ಟು ೨೦೦,೬೨,೯೩,೦೨೭ ರೂ. ಗಳನ್ನು ಲೂಟಿ ಮಾಡಿರುವುದು ಬಟಾಬಯಲಾಗಿದೆ ಎಂದರು.
ಕಳೆದ ೭೫ ವರ್ಷಗಳಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿರುವ ೨೫ ಮಂದಿ ಮುಖ್ಯಮಂತ್ರಿಗಳ ಪೈಕಿ, ಬೇರೆ ಇನ್ಯಾವ ಮುಖ್ಯಮಂತ್ರಿಗಳ ಅವಧಿಯಲ್ಲೂ ಸಹ ನಡೆಯದ “ಅತಿಥಿ ಉಪಚಾರ”ದ ಹೆಸರಿನ ಇಂತಹ ಭ್ರಷ್ಟಾಚಾರ ಸಿದ್ಧರಾಮಯ್ಯ ಅವಧಿಯಲ್ಲಿ ನಡೆದಿದೆ ಎಂದ ಅವರು,
ಈ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅವರ ಅವಧಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ನೀಡಲಾಗಿದೆ ಎಂದು ರಮೇಶ್ ಹೇಳಿದರು.