ಸಿದ್ದುವಿನ ಸೋಕ್ಕಿನ, ಧಿಮಾಕಿನ ಮಾತಿಗೆ ಜನ ಬೆಲೆ ಕೊಡಲ್ಲ


ದಾವಣಗೆರೆ,ಡಿ.4: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ವಿರೋಧ ಪಕ್ಷದ ನಾಯಕ ಎಂಬುದನ್ನು ಮರೆತು, ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದು, ಅವರಿಗೆ ಚುನಾವಣೆ ಫಲಿತಾಂಶವೇ ಉತ್ತರ ಕೊಡಲಿದೆ. ಅವರ ಸೊಕ್ಕಿನ, ಧಿಮಾಕಿನ ಮಾತಿಗೆ ಯಾರೂ ಬೆಲೆ ಕೊಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.ತಾಲ್ಲೂಕಿನ ಆನಗೋಡು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಸ್ವತಃ ಚುನಾವಣೆಯಲ್ಲಿ ಸೋತಿರುವ ಸಿದ್ದರಾಮಯ್ಯ ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡಿದರೆ ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಎಲ್ಲೆಲ್ಲಿ ಸ್ಪರ್ಧಿಸಿಲ್ಲವೋ ಅಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಬಹಿರಂಗವಾಗಿಯೇ ಚರ್ಚಿಸಿದ್ದೇನೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಇಲ್ಲದೆ ಕಡೆಗಳಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಲಿಸುವ ವಿಶ್ವಾಸವಿದೆ ಎಂದ ಅವರು, ಎಚ್.ಡಿ.ದೇವೇಗೌಡರು ಪ್ರಧಾನಿ ಅವರನ್ನು ಭೇಟಿಯಾಗಿರುವುದರ ಹಿಂದೆ ಚುನಾವಣೆಯ ವಿಷಯವಿಲ್ಲ ಎಂದು ಸ್ಪಷ್ಟಪಡಿಸಿದರು.ರಾಜ್ಯದ 25 ವಿಧಾನಪರಿಷತ್ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ 23 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಕೆ.ಎಸ್.ನವೀನ್ ಸೇರಿದಂತೆ 15 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ 15 ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸಿದರೆ ವಿಧಾನ ಪರಿಷತ್‌ನಲ್ಲಿ ನಾವು ಯಾರನ್ನೂ ಅವಲಂಬಿಸಬೇಕಿಲ್ಲ ಎಂದರು,ನವೀನ್ ಅವರು ಎರಡು ಬಾರಿ ಸೋತಿರುವುದರ ಬಗ್ಗೆ ಮತದಾರರಲ್ಲಿ ಅನುಕಂಪವಿದ್ದು, ನವೀನ್‌ಗೆ ಮೊದಲ ಪ್ರಾಶಸ್ತö್ಯದ ಮತ ನೀಡಿ ಗೆಲ್ಲಿಸಲಿದ್ದಾರೆಂಬ ವಿಶ್ವಾಸವಿದ್ದು, ಬೆಂಗಳೂರಿನಿಂದ ಹಣ ತಡಗೆದುಕೊಂಡು ಬಂದಿರುವ ಕಾಂಗ್ರೆಸ್‌ನ ಅಭ್ಯರ್ಥಿ ಇಲ್ಲಿ ಹಣ ಕಳೆದುಕೊಂಡು ಮತ್ತೆ ವಾಪಸ್ ಬೆಂಗಳೂರಿಗೆ ಹೋಗುತ್ತಾರೆ ಎಂದು ಹೇಳಿದರು.