ಸಿದ್ದುರಿಂದಲೇ ವರ್ಗಾವಣೆ ದಂಧೆ ಎಚ್‌ಡಿಕೆ ಗುಡುಗು

(ಸಂಜೆವಾಣಿ ಪ್ರತಿನಿಧಿಯಿಂದ)
ಮೈಸೂರು,ಜು.೬:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲೇ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಗುಡುಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ತಮ್ಮ ಬಳಿ ಇರುವ ಪೆನ್‌ಡ್ರೈವ್ ರಹಸ್ಯ ಬಹಿರಂಗಗೊಂಡರೆ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದು, ಆತನ ಆರೋಗ್ಯ ವಿಚಾರಿಸುವ ಸಲುವಾಗಿ ಕುಮಾರಸ್ವಾಮಿ ಅವರು ಇಂದು ಬೆಳಿಗ್ಗೆ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ದಂಧೆ ಕುರಿತಂತೆ ತಮ್ಮ ಬಳಿ ಇರುವ ಪೆನ್‌ಡ್ರೈವ್ ದಾಖಲೆಯನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರ ಏನು ಮಾತನಾಡಬೇಕೋ ಎಲ್ಲವನ್ನೂ ಮಾತನಾಡಲಿ, ತಾವು ಪ್ರಸ್ತಾಪಿಸುತ್ತಿರುವ ವಿಷಯದ ಬಗ್ಗೆ ಕಾಂಗ್ರೆಸ್ ನಾಯಕರು ಹಿಟ್ ಅಂಡ್ ರನ್ ಎಂದು ಹೇಳುತ್ತಿದ್ದಾರೆ. ಅವರು ಹೀಗೇ ಮಾತನಾಡುತ್ತಿರಲಿ ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದರು.ಮುಖ್ಯಮಂತ್ರಿಗಳ ಮೂಲಕವೇ ವರ್ಗಾವಣೆ ಆದೇಶವಾಗುತ್ತಿದೆ. ಸರ್ಕಾರ ನಡೆಯಬೇಕಾದರೆ ವರ್ಗಾವಣೆ ಅನಿವಾರ್ಯ, ಆದರೆ, ಯಾವ ಅಳತೆಗೋಲು ಮುಂದಿಟ್ಟುಕೊಂಡು ವರ್ಗಾವಣೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಅವರು, ಇಷ್ಟೊಂದು ಅನುಭವ ಹೊಂದಿರುವ ಮುಖ್ಯಮಂತ್ರಿಯವರಿಗೆ ಇವೆಲ್ಲವೂ ಗೊತ್ತಿಲ್ಲವೇ? ಎಲ್ಲ ಪ್ರಮುಖ ಹುದ್ದೆಗಳು ದುಡ್ಡಿನಿಂದಲೇ ವರ್ಗಾವಣೆಯಾಗುತ್ತಿದೆ ಎಂದು ಕಿಡಿಕಾರಿದರು.ಬಿಜೆಪಿಯವರು ವಿಪಕ್ಷ ಸ್ಥಾನದಲ್ಲಿದ್ದಾರೆ. ನಾವೂ ಕೂಡ ಪ್ರತಿಪಕ್ಷ ಸ್ಥಾನದಲ್ಲಿದ್ದೇವೆ. ಸರ್ಕಾರದ ವಿರುದ್ಧ ಹೋರಾಟ ಮಾಡುವ ಕುರಿತು ಪರಸ್ಪರ ಸಹಕಾರ ಪಡೆಯುತ್ತೇವೆ. ಬಿಜೆಪಿಯಲ್ಲೂ ಹಲವು ಸಮರ್ಥ ನಾಯಕರಿದ್ದಾರೆ. ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕರಾಗುವ ಸಮರ್ಥರೂ ಇದ್ದಾರೆ ಎಂದರು.
ರಾಜ್ಯದಲ್ಲಿ ಹೊಸ ಟ್ಯಾಕ್ಸ್
ಟ್ಯಾಕ್ಸ್ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಟ್ಯಾಕ್ಸ್ ಹಿಡಿದರೆ ಮಾತ್ರ ಕಾಂಗ್ರೆಸ್‌ಗೆ ಲಾಭ, ಅದರಲ್ಲೂ ಮತ್ತೆ ವೈಎಸ್‌ಟಿ ಟ್ಯಾಕ್ಸ್‌ನ್ನು ಉಲ್ಲೇಖಿಸಿದ ಅವರು, ಈ ಟ್ಯಾಕ್ಸ್ ಬಗ್ಗೆ ಪ್ರತಿಯೊಬ್ಬ ರಾಜಕಾರಣಿಗೂ ಗೊತ್ತಿದೆ. ತಮಗೂ ಯಾರೋ ಈ ಬಗ್ಗೆ ಹೇಳಿದರು. ಆದರೆ, ವೈಎಸ್‌ಟಿ ಎಂದರೆ ಏನು ಎಂಬ ಪ್ರಶ್ನೆಗೆ ಜಾಣ್ಮೆಯ ಉತ್ತರ ನೀಡಿ ತಮಗೂ ಸರಿಯಾಗಿ ಗೊತ್ತಿಲ್ಲ. ಈ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

’ಕೈ’ನಿಂದ ದ್ವೇಷ ರಾಜಕಾರಣ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದ್ವೇಷ ರಾಜಕಾರಣ ಆರಂಭಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿ ವೆಂಟಿಲೇಟರ್‌ನಲ್ಲಿದ್ದಾರೆ. ಸಿಬ್ಬಂದಿಯನ್ನು ವರ್ಗಾವಣೆ ಮಾಡುವುದಾದರೆ ಮಾಡಲಿ, ಆದರೆ, ಈ ರೀತಿ ಕಿರುಕುಳ ನೀಡುವುದು ಸರಿಯಲ್ಲ. ಜಗದೀಶ್ ಪತ್ನಿ ಪಂಚಾಯತಿ ಸದಸ್ಯರಾಗಿದ್ದಾರೆ ಎಂದರು.
ಊರಿನಲ್ಲಿರುವ ರೌಡಿ ತಮ್ಮ ಚೇಲಾ ಮಹದೇವ ಎಂಬಾತ ಜಗದೀಶ್ ಕುಟುಂಬಕ್ಕೆ ಕಿರುಕುಳ ನೀಡಿದ್ದಾನೆ. ಹೆಣ್ಣು ಮಗಳಿಗೆ ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುವಂತೆ ಒತ್ತಡ ಹೇರಿದ್ದಾನೆ. ಮತ್ತೊಂದೆಡೆ ಜಗದೀಶ್‌ಗೆ ಅಧಿಕಾರಿಗಳ ಮೂಲಕ ಕಿರುಕುಳ ನೀಡಲಾಗುತ್ತಿದೆ. ಡೆತ್‌ನೋಟ್‌ನಲ್ಲಿ ಈ ಬಗ್ಗೆ ಜಗದೀಶ್‌ರವರು ಸ್ಪಷ್ಟವಾಗಿ ಬರೆದಿದ್ದಾರೆ.
ಈ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಅವರ ಆದೇಶ ಒತ್ತಡವೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಚೆಲುವರಾಯಸ್ವಾಮಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಹೇಳಿದರು.
ಘಟನೆ ಕುರಿತು ಅಧಿಕಾರಿಗಳನ್ನು ಕೇಳಿದರೆ ವ್ಯಕ್ತಿ ಇನ್ನು ಸತ್ತಿಲ್ಲ. ಆ ಕಾರಣಕ್ಕೆ ಎಫ್‌ಐಆರ್ ಹಾಕಿಲ್ಲ ಎಂದು ಹೇಳುತ್ತಿದ್ದಾರೆ. ಜನರು ಮತ ಹಾಕಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿರುವುದು ಜನರ ಜೀವನದ ಜತೆ ಚೆಲ್ಲಾಟವಾಡಲು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.