ಸಿದ್ದರಾಮೋತ್ಸವ ಕೈನಲ್ಲಿ ರಣೋತ್ಸಾಹ

ಒಗ್ಗಟ್ಟಿನ ಜಪ

ದಾವಣಗೆರೆ, ಆ. ೩- ದೇವನಗರಿ ದಾವಣಗೆರೆಯಲ್ಲಿ ಇಂದು ನಡೆದಿರುವ ಸಿದ್ದರಾಮೋತ್ಸವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಯಕತ್ವಕ್ಕೆ ಬಲ ತುಂಬುವ ಜತೆಗೆ ಮುಂದಿನ ಚುನಾವಣೆಯನ್ನು ಗೆದ್ದು ಅಧಿಕಾರ ಹಿಡಿಯುವ ಉಮೇದಿನಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಅಮಿತೋತ್ಸಾಹ ತುಂಬಿದೆ.ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಮೃತ ಮಹೋತ್ಸವದಲ್ಲಿ ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ಭಾಗಿಯಾಗಿರುವುದು ಮುಂದಿನ ಎಲ್ಲ ಚುನಾವಣೆಗಳಲ್ಲಿ ಜಯಭೇರಿ ಬಾರಿಸುವ ಕಾರ್ಯಕರ್ತರ ಉತ್ಸಾಹಕ್ಕೆ ಮತ್ತಷ್ಟು ಶಕ್ತಿ ತಂದಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವ ಆಶಯ ಹೊಂದಿರುವ ಸಿದ್ದರಾಮೋತ್ಸವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿ, ಚುನಾವಣೆಗೆ ಪಕ್ಷ ಈಗಿನಿಂದಲೇ ಸಜ್ಜಾಗಿರುವ ಸಂದೇಶವನ್ನು ನೀಡಿದೆ.
ಮುಂದಿನ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಎದುರಿಸುವ ನಿರ್ಧಾರಗಳು ಆಗಿದ್ದರೂ ಈ ಸಿದ್ದರಾಮೋತ್ಸವ ಸಿದ್ದರಾಮಯ್ಯನವರ ನಾಯಕತ್ವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ, ನವೋಲ್ಲಾಸವನ್ನು ಮೂಡಿಸಿದೆ.ದಾವಣಗೆರೆಯಲ್ಲಿ ನಡೆದಿರುವ ಸಿದ್ದರಾಮಯ್ಯನವರ ೭೫ನೇ ಹುಟ್ಟುಹಬ್ಬಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನ ಪ್ರವಾಹೋಪಾದಿಯಲ್ಲಿ ಬಂದಿರುವುದು ಸಿದ್ದರಾಮಯ್ಯನವರ ಜನಪ್ರಿಯತೆ, ಗಟ್ಟಿ ನಾಯಕತ್ವಕ್ಕೆ ಈ ಸಮಾವೇಶ ಸಾಕ್ಷಿಯಾಗಿದೆ.
ಇಂದು ಬೆಳಿಗ್ಗೆಯಿಂದಲೇ ರಾಜ್ಯದ ವಿವಿಧೆಡೆಗಳಿಂದ ನೂರಾರು ವಾಹನಗಳಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ದಾವಣಗೆರೆಗೆ ಹರಿದು ಬಂದಿದ್ದು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಘೋಷಣೆಗಳು ಮುಗಿಲು ಮುಟ್ಟಿವೆ.
ಈ ಸಮಾವೇಶದಲ್ಲಿ ಪಾಲ್ಗೊಂಡಿರುವ ಎಲ್ಲಾ ಕಾರ್ಯಕರ್ತರುಗಳು ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂಬ ಮನಸ್ಥಿತಿಯಲ್ಲಿರುವಂತೆ ಭಾಸವಾಗುತ್ತಿದೆ. ಎಲ್ಲರಲ್ಲೂ ಉತ್ಸಾಹ ಎಲ್ಲೆ ಮೀರಿದೆ. ಎಲ್ಲರ ಬಾಯಲ್ಲೂ ಸಿದ್ದರಾಮಯ್ಯನವರದ್ದೇ ಜಪ.
ಈ ಹುಟ್ಟುಹಬ್ಬದಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿಯವರು ಸಿದ್ದರಾಮೋತ್ಸವದ ವೇದಿಕೆಯನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಏಕೈಕ ಗುರಿಯೊಂದಿಗೆ ಎಲ್ಲರೂ ಒಟ್ಟಾಗಿ, ಒಗ್ಗಟ್ಟಾಗಿ, ಭಿನ್ನಾಭಿಪ್ರಾಯಗಳನ್ನು ಮರೆತು ಕೆಲಸ ಮಾಡಿ ಎಂಬ ಸಂದೇಶವನ್ನು ನೀಡಿದ್ದಾರೆ.ಈ ಕಾರ್ಯಕ್ರಮವನ್ನು ಕಾಂಗ್ರೆಸ್‌ನ ಎಲ್ಲಾ ನಾಯಕರುಗಳು ಭಾಗಿಯಾಗುವ ಮೂಲಕ ಪಕ್ಷದ ಒಗ್ಗಟ್ಟನ್ನು ಪ್ರದರ್ಶಿಸಿದ್ದು, ಮುಂದಿನ ಚುನಾವಣೆಯಲ್ಲೂ ಇದೇ ಒಗ್ಗಟ್ಟನ್ನು ಕಾಪಾಡಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ತೊಟ್ಟರು.

ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಭಾಗವಹಿಸಿರುವ ಜನಸ್ತೋಮ.

ಅಚ್ಚುಕಟ್ಟಾದ ವ್ಯವಸ್ಥೆ ಸಿದ್ದರಾಮಯ್ಯನವರ ಈ ಹುಟ್ಟುಹಬ್ಬಕ್ಕೆ ಜನಸಾಗರವೇ ಹರಿದು ಬಂದಿದ್ದು, ಪ್ರತಿಯೊಬ್ಬರಿಗೂ ಉಪಹಾರ, ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.ಸಮಾವೇಶಕ್ಕೆ ಲಕ್ಷಾಂತರ ಮಂದಿ ಬಂದಿದ್ದು, ಸಮಾವೇಶ ನಡೆಯುವ ಸ್ಥಳಕ್ಕೆ ತಲುಪಲು ಕಾರ್ಯಕರ್ತರು, ಅಭಿಮಾನಿಗಳು ಹರಸಾಹಸ ಪಡುತ್ತಿದ್ದು, ಸಮಾವೇಶದ ಸ್ಥಳದಿಂದ ೩ ಕಿಲೋ ಮೀಟರ್ ದೂರದಲ್ಲೇ ವಾಹನಗಳನ್ನು ನಿಲ್ಲಿಸಿ ನಡೆದುಕೊಂಡೇ ಸಮಾವೇಶ ಸ್ಥಳ ತಲುಪುತ್ತಿದ್ದಾರೆ.ಪ್ರತಿಯೊಬ್ಬ ಕಾರ್ಯಕರ್ತರು, ಅಭಿಮಾನಿಗಳು ದಾರಿಯುದ್ದಕ್ಕೂ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರ ಪರ ಜೈಕಾರ, ಘೋಷಣೆಗಳನ್ನು ಕೂಗುತ್ತಿದ್ದ ದೃಶ್ಯಗಳು ಸಾಮಾನ್ಯ ಎನಿಸಿದೆ.
ರಾತ್ರಿ ೧೨ ಗಂಟೆಗೆ ಹುಟ್ಟುಹಬ್ಬ ಆಚರಣೆ ಕಾಂಗ್ರೆಸ್ ನಾಯಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬವನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.ರಾತ್ರಿ ಸರಿಯಾಗಿ ೧೨ ಗಂಟೆಗೆ ಸಿದ್ದರಾಮಯ್ಯನವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರಿಗೆ ಡಿ.ಕೆ. ಶಿವಕುಮಾರ್ ಕೇಕ್ ತಿನ್ನಿಸಿ ಶುಭಕೋರಿದರು. ಹಾಗೆಯೇ ಸಿದ್ದರಾಮಯ್ಯನವರು ಸಹ ಡಿ.ಕೆ. ಶಿವಕುಮಾರ್ ಅವರಿಗೆ ಕೇಕ್ ತಿನ್ನಿಸುವ ಮೂಲಕ ಸಂತಸ ಹಂಚಿಕೊಂಡರು.
ಈ ಸಂದರ್ಭದಲ್ಲಿ ಹಿರಿಯ ನಾಯಕರುಗಳಾದ ಆರ್.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್ ಎಲ್ಲರೂ ಸಿದ್ದರಾಮಯ್ಯನವರಿಗೆ ಶುಭಾಶಯ ಕೋರಿದರು.

ಅದ್ಧೂರಿ ಸ್ವಾಗತ
ಸಿದ್ದರಾಮೋತ್ಸವದ ಬೃಹತ್ ವೇದಿಕೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೂ ಮಳೆಯ ಅದ್ದೂರಿ ಸ್ವಾಗತ ಕೋರಿದರು.
ಸಿದ್ದರಾಮಯ್ಯನವರನ್ನು ಅಭಿನಂದಿಸಲು ಶಾಸಕರು, ಸಂಸದರು, ಮುಖಂಡರುಗಳು ಮುಗಿ ಬಿದ್ದರು.
ಎಲ್ಲರೂ ಸಿದ್ದರಾಮಯ್ಯನವರ ಕೈ ಕುಲುಕಿ ಹುಟ್ಟುಹಬ್ಬದ ಶುಭಾಶಯ ಹೇಳಿದರು. ಮತ್ತೆ ಕೆಲವು ಅಭಿಮಾನಿಗಳು ಸಿದ್ದರಾಮಯ್ಯನವರಿಗೆ ಹಾರ ಹಾಕಿ, ಪೇಟ ತೊಡಿಸಿ ತಮ್ಮ ಅಭಿಮಾನ ಮೆರೆದರು.
ಕುರಿ ಮರಿ ಕಾಣಿಕೆ
ಸಿದ್ದರಾಮಯ್ಯನವರಿಗೆ ಹುಟ್ಟುಹಬ್ಬದ ಉಡುಗೊರೆ ನೀಡಲು ರಾಯಚೂರಿನ ಅಭಿಮಾನಿಯೊಬ್ಬ ಕುರಿ ಮರಿ ತಂದಿದ್ದು, ಅದನ್ನು ಸಿದ್ದರಾಮಯ್ಯನವರಿಗೆ ನೀಡಿ ಸಂತಸ ಪಟ್ಟರು.
ಸಮಾವೇಶದಲ್ಲಿ ಡೊಳ್ಳು ಕುಣಿತ ಸೇರಿದಂತೆ ಜಾನಪದ ವಾದ್ಯಗಳು ಜನರನ್ನು ರಂಜಿಸಿದ್ದು, ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಸಾಧುಕೋಕಿಲ ಸಹ ತಮ್ಮ ಗಾನಸಿರಿಯಿಂದ ನೆರೆದಿದ್ದವರಿಗೆ ಮನರಂಜನೆ ನೀಡಿದರು.
ದೇಗುಲ-ದರ್ಗಾಕ್ಕೆ ಭೇಟಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯಯನವರು ಸಿದ್ದರಾಮೋತ್ಸವದ ವೇದಿಕೆಗೆ ಆಗಮಿಸುವ ಮೊದಲು ದಾವಣಗೆರೆಯ ದುರ್ಗಾಂಬೆ ದೇಗುಲ ಹಾಗೂ ಹಜರತ್ ಅಲಿ ಷಾ ದರ್ಗಾಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.