ಸಿದ್ದರಾಮೋತ್ಸವ ಅಲ್ಲ ಅಮೃತ ಮಹೋತ್ಸವ:ಸಿದ್ದು ಸ್ಪಷ್ಟನೆ

ದಾವಣಗೆರೆ, ಜು.12- ಮುಂದಿನ ತಿಂಗಳು ಮೂರರಂದು ನಡೆಯುತ್ತಿರುವುದು ಸಿದ್ದರಾಮೋತ್ಸವ ಅಲ್ಲವೆಂದು ಸ್ಪಷ್ಟಪಡಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತಮ್ಮ ಜನ್ಮದಿನದ 75 ನೇ ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರೂ ಸಿದ್ದರಾಮೋತ್ಸವ ಎಂದು ಕರೆದಿಲ್ಲ. ಮಾಧ್ಯಮದವರು ಮತ್ತು ಆರ್‌ಎಸ್ ಎಸ್ ಸಿದ್ದರಾಮೋತ್ಸವ ಎಂಬುದಾಗಿ ಕರೆದಿದ್ದಾರೆ. ತಾವು ಯಾವತ್ತೂ ಜನ್ಮ ದಿನ ಆಚರಿಸಿಕೊಂಡಿಲ್ಲ. ಮುಂದೆಯೂ ಆಚರಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಶಾಲಾ ದಾಖಲಾತಿ ಅನುಸಾರ 3.8.1947ರಂದು ತಮ್ಮ ಜನ್ಮ ದಿನ. ಯಾರೇ ಜೀವನದಲ್ಲೇ ಆಗಲಿ 50, 75, 100 ವರ್ಷ ಮೈಲಿಗಲ್ಲಿದ್ದಂತೆ. ನನಗೆ 75 ವರ್ಷ ಆಗುತ್ತಿದೆ. ಸಾರ್ವಜನಿಕ ಕ್ಷೇತ್ರದಲ್ಲಿ 40 ವರ್ಷದಿಂದ ಇದ್ದೇನೆ. ಹಾಗಾಗಿ ಆಪ್ತರು, ಅಭಿಮಾನಿ ಗಳು ಎಲ್ಲರೂ ಸೇರಿಕೊಂಡು ದಾವಣಗೆರೆಯಲ್ಲಿ ವಿಜೃಂಭಣೆಯಿಂದ ಅಮೃತ ಮಹೋತ್ಸವ ಕಾರ್‍ಯಕ್ರಮ ಮಾಡುತ್ತಿದ್ದಾರೆ. ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಕಾರ್‍ಯಕ್ರಮ ಮಾಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅಮೃತ ಮಹೋತ್ಸವ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯವರಿಗೆ ಭಯವಾಗುತ್ತಿದೆ. ಮಂತ್ರಿ ಸ್ಥಾನ ಕಳೆದುಕೊಂಡ ಬಳಿಸ ಈಶ್ವರಪ್ಪನವರಿಗೆ ಮಾನಸಿಕ ಆರೋಗ್ಯ ಸ್ಥಿರವಾಗಿಲ್ಲ ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.