ಸಿದ್ದರಾಮೋತ್ಸವದ ಕೋಲಾರಕ್ಕೆ ವರದಾನವಾಗಲಿ

ಕೋಲಾರ,ಆ.೬: ಸಿದ್ದರಾಮೋತ್ಸವದ ಮೂಲಕ ರಾಜ್ಯದಲ್ಲಿ ರಾಜಕೀಯ ಸಂಚಲನ ಮೂಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಬೇಕೆಂದುನಗರಸಭೆ ಸದಸ್ಯೆ ಎನ್.ಎಂ.ಭಾಗ್ಯಜಯರಾಂ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದರೆ ಕುರುಬ ಸಮಾಜ ಮತ್ತಷ್ಟು ಒಗ್ಗೂಡುತ್ತದೆ. ಮಾಜಿ ಸಚಿವ ವರ್ತೂರ್ ಪ್ರಕಾಶ್ ಹೇಳುವಂತೆ ಯಾವುದೇ ಕಾರಣಕ್ಕೂ ಒಡೆಯುವುದಿಲ್ಲ. ಇಡೀ ಕುರುಬ ಸಮಾಜ ಸಿದ್ದರಾಮಯ್ಯ ಅವರ ಜತೆ ಇರುವುದರಿಂದ ಸಮೂದಾಯದ ಮುಖಂಡನಿಗೆ ವೀರೋಚಿತ ಗೆಲುವು ಸಿಕ್ಕುತ್ತದೆ ಎಂದು ಹೇಳಿದ್ದಾರೆ.
ಬರಡು ಜಿಲ್ಲೆಗೆ ಕೆಸಿ ವ್ಯಾಲಿ ಯೋಜನೆ ಮೂಲಕ ವಿಫುಲವಾದ ನೀರನ್ನು ಶಾಶ್ವತವಾಗಿ ಹರಿಸುವ ಮೂಲಕ ಕೋಲಾರದ ಭಗೀರಥ ಎನಿಸಿರುವ ಸಿದ್ದರಾಮಯ್ಯ ಅವರು ಯರ್ರಗೋಳ್ ಯೋಜನೆ ಅನುಷ್ಟಾನಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅಂತೆಯೇ ದಶಕಗಳಿಂದ ಕುಂಟುತ್ತಿರುವ ಕೋಲಾರ ಜಿಲ್ಲೆಯ ಕುಡಿಯುವ ನೀರಿನ ಯೋಜನೆ ಎನಿಸಿರುವ ಎತ್ತಿನಹೊಳೆ ಪ್ರಾಜೆಕ್ಟ್ ಪೂರ್ಣಗೊಳ್ಳಲು ಸಿದ್ದರಾಮಯ್ಯ ಅವರ ಸಹಕಾರ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಕೋಲಾರಕ್ಕೆ ಸಿದ್ದರಾಮಯ್ಯ ಅವರ ಸ್ಪರ್ಧೆ ನಮಗೆ ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ರಾಜ್ಯದ ೨೨ ಕ್ಷೇತ್ರಗಳಲ್ಲಿ ಎಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುವ ಶಕ್ತಿ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೂ ಅಭಿವೃದ್ಧಿ ದೃಷ್ಠಿಯಿಂದ ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಕ್ಷೇತ್ರಕ್ಕೆ ಅನುಕೂಲ ಆಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ರಾಜಧಾನಿಗೆ ಕೂಗಳತೆ ದೂರದಲ್ಲಿರುವ ಜಿಲ್ಲಾ ಕೇಂದ್ರ ದೊಡ್ಡ ಹಳ್ಳಿಯಂತೆ ಇದೆ ಎಂಬ ಆರೋಪ ಸರ್ವೇ ಸಾಮಾನ್ಯವಾಗಿದ್ದು ಬಹುತೇಕ ವೇದಿಕೆಗಳಲ್ಲಿ ಈ ವಿಷಯ ಚರ್ಚೆ ಆಗುತ್ತಲೇ ಇದೆ. ಈ ಅಪಖ್ಯಾತಿಯನ್ನು ತೊಡೆದುಕೊಳ್ಳಲು ಇದು ಸಕಾಲವಾಗಿದ್ದು ಹೀಗಾಗಿ ಸಿದ್ದರಾಮಯ್ಯ ಅವರಿಗಿಂತ ಕೋಲಾರ ಕ್ಷೇತ್ರದ ಜನರಿಗೆ ಸಿದ್ದು ಸ್ಪರ್ಧೆ ಹೆಚ್ಚು ಆಪ್ಯಾಯಮಾನ ಆಗಿದೆ ಎಂಬುದು ಸುಳ್ಳಲ್ಲ. ಜತೆಗೆ ಕೋಲಾರ ಬೆಂಗಳೂರಿಗೆ ಅಂಟಿಕೊಂಡಿಕೊಂಡಿರುವುದರಿಂದ ಸಿದ್ದರಾಮಯ್ಯ ಅವರು ಒಂದು ಗಂಟೆ ಸಮಯಕ್ಕೆಲ್ಲಾ ಕೋಲಾರ ತಲುಪಿಕೊಂಡು ಆಡಳಿತ ನಡೆಸಬಹುದಾಗಿರುತ್ತದೆ. ವಯಸ್ಸು ಮತ್ತು ಆರೋಗ್ಯದ ದೃಷ್ಠಿಯಿಂದ ಕೋಲಾರ ಹೆಚ್ಚು ಸಹಾಯಕವಾಗಿದೆ. ಉಳಿದಂತೆ ಕೋಲಾರ ಮತ ಕ್ಷೇತ್ರದಲ್ಲಿ ಅಹಿಂದ ಮತಗಳ ಮಹಾಪೂರವೇ ಇದ್ದು ಜಾತಿ ಮತ್ತು ಪಕ್ಷಾತೀತವಾಗಿ ಸಿದ್ದರಾಮಯ್ಯ ಅವರಿಗೆ ಮತಗಳು ಹರಿದು ಬರುವುದರಿಂದಾಗಿ ಮುಖ್ಯಮಂತ್ರಿ ಅಭ್ಯರ್ಥಿಗೆ ಕೋಲಾರ ಹೆಚ್ಚು ಸುರಕ್ಷಿತವೂ ಆಗಿದೆ.
ಕೆಸಿ ರೆಡ್ಡಿ ನಂತರದಲ್ಲಿ ಕೋಲಾರಕ್ಕೆ ಸಿಎಂ ಹುದ್ದೆ ಸಿದ್ದರಾಮಯ್ಯ ಅವರ ಮೂಲಕ ಮತ್ತೆ ಸಿಗುವ ಲಕ್ಷಣಗಳು ಇರುವುದರಿಂದ ಇಂತಹ ಅವಕಾಶವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಂದಾಗಲೆಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜೆ.ಕೆ.ಜಯರಾಂ ಹಾಗೂ ನಗರಸಭೆ ಸದಸ್ಯೆ ಎನ್.ಎಂ.ಭಾಗ್ಯಜಯರಾಂ ಒತ್ತಾಯಿಸಿದ್ದಾರೆ.
_