ಸಿದ್ದರಾಮೋತ್ಸವದತ್ತ ಎಲ್ಲರ ಚಿತ್ತ

ಬೆಂಗಳೂರು,ಆ. ೨- ನಾಳೆ ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ವರಿಷ್ಠ ರಾಹುಲ್‌ಗಾಂಧಿ ಇಂದು ರಾಜ್ಯಕ್ಕೆ ಆಗಮಿಸುವರು.
ನವದೆಹಲಿಯಿಂದ ರಾಹುಲ್‌ಗಾಂಧಿ ಅವರು ನೇರವಾಗಿ ಇಂದು ಸಂಜೆ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿ, ಅಲ್ಲಿಯೇ ವಾಸ್ತವ್ಯ ಹೂಡುವರು. ನಾಳೆ ಬೆಳಿಗ್ಗೆ ಅವರು ದಾವಣಗೆರೆಯಿಂದ ಚಿತ್ರದುರ್ಗಕ್ಕೆ ತೆರಳಿ ಮುರುಘಾ ಮಠದ ಶ್ರೀಗಳನ್ನು ಭೇಟಿ ಮಾಡಿ ಅವರ ಆರ್ಶೀವಾದ ಪಡೆಯುವರು. ನಂತರ ಅವರು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮಯ್ಯರವರು ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಳೆ ಸಂಜೆ ದೆಹಲಿಗೆ ವಾಪಸ್ಸಾಗುವರು.
ಭರದ ಸಿದ್ಧತೆ
ದಾವಣಗೆರೆಯಲ್ಲಿ ಸಿದ್ದರಾಮಯ್ಯರವರ ಅಮೃತ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆಗಳು ನಡೆದಿದ್ದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶ್ಯಾಮನೂರು ಪ್ಯಾಲೇಸ್ ಮೈದಾನದಲ್ಲಿ ಸಿದ್ದರಾಮೋತ್ಸವ ನಡೆಯಲಿದ್ದು, ಇದಕ್ಕಾಗಿ ಅರಮನೆ ಮಾದರಿಯಲ್ಲಿ ಬೃಹತ್ ವೇದಿಕೆಯನ್ನು ಸಿದ್ದಗೊಳಿಸಲಾಗಿದೆ. ವೇದಿಕೆಯ ಮುಂಭಾಗದಲ್ಲಿ ಸುಮಾರು ೬ ಲಕ್ಷ ಜನರಿಗೆ ಆಸನಗಳನ್ನು ಹಾಕಲಾಗಿದ್ದು, ಸುಮಾರು ೨ ಲಕ್ಷ ಆಸನಗಳಿಗೆ ಮಳೆ ಬಂದರೂ ಯಾವುದೇ ತೊಂದರೆಯಾಗದಂತೆ ಮೇಲು ಹೊದಿಕೆಯನ್ನು ವ್ಯವಸ್ಥೆ ಮಾಡಲಾಗಿದೆ.
ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲೆಡೆಯಿಂದ ಸಿದ್ದರಾಮಯ್ಯರವರ ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ಕರೆತರಲು ೭ ಸಾವಿರ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಊಟ, ಉಪಾಹಾರ, ಕುಡಿಯುವ ನೀರು, ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದ್ದು, ಕಾರ್ಯಕರ್ತರಿಗೆ ಸಿಹಿಯೂಟದ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಬರುವವರಿಗೆ ಹಂಚಲು ಸುಮಾರು ೬ ಲಕ್ಷ ಮೈಸೂರ್‌ಪಾಕ್‌ನ್ನು ಸಿದ್ಧಗೊಳಿಸಲಾಗಿದೆ.
ಸಿದ್ದರಾಮಯ್ಯರವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರ ಜೀವನದ ವಿವಿಧ ೫೦೦ ಛಾಯಾಚಿತ್ರಗಳನ್ನು ಬಳಸಿ ೩ ಸಾವಿರ ಮೀ. ಉದ್ದದ ಫೋಟೊ ಬಯೋಗ್ರಫಿಯನ್ನು ಸಿದ್ದಪಡಿಸಲಾಗಿದ್ದು, ಸವದತ್ತಿಯ ಕಾಂಗ್ರೆಸ್ ಮುಖಂಡ ಸೌರಭ್‌ಛೋಪ್ರಾ ಮತ್ತು ಆನಂದ್‌ಛೋಪ್ರಾ ಅವರು ೩ ಸಾವಿರ ಉದ್ದದ ಬಟ್ಟೆಯನ್ನು ಬಳಸಿ ಈ ಬಯೋಗ್ರಫಿಯನ್ನು ಸಿದ್ಧಪಡಿಸಿದ್ದು, ವೇದಿಕೆಯಿಂದ ೩ ಕಿ.ಮೀ ದೂರದಲ್ಲಿ ಇದನ್ನು ನಾಳೆ ಸಿದ್ದರಾಮಯ್ಯ ಉದ್ಘಾಟಿಸುವರು.
ಬೃಹತ್ ಕಟೌಟ್, ಫ್ಲೆಕ್ಸ್,
ಈ ಕಾರ್ಯಕ್ರಮಕ್ಕೆ ದಾವಣಗೆರೆಯ ಎಲ್ಲೆಡೆ ಕಾಂಗ್ರೆಸ್ ಧ್ವಜಗಳು ಹಾರಾಡುತ್ತಿದ್ದು, ಸ್ವಾಗತ ಕೋರುವ ಫ್ಲೆಕ್ಸ್‌ಗಳು, ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. ಇಡೀ ನಗರ ಕಾಂಗ್ರೆಸ್‌ಮಯವಾಗಿದೆ. ರಾಹುಲ್‌ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ವಿವಿಧ ನಾಯಕರುಗಳ ಬೃಹತ್ ಕಟೌಟ್‌ನ್ನು ನಿಲ್ಲಿಸಲಾಗಿದ್ದು, ವೇದಿಕೆಯ ಮುಂಭಾಗದಲ್ಲೂ ಸಿದ್ದರಾಮಯ್ಯರವರ ೭೫ ಅಡಿ ಎತ್ತರದ ಕಟೌಟ್‌ನ್ನು ನಿರ್ಮಾಣ ಮಾಡಲಾಗಿದೆ.