ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ಗರಂ

ಕಲಬುರಗಿ,ನ.30-ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟಿಲ್ ಒಬ್ಬ ಭಯೋತ್ಪಾದಕ ಎನ್ನುವ ವಿಪಕ್ಷ ನಾಯಕ ಸಿದ್ರಾಮಯ್ಯ ಹೇಳಿಕೆಗೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಗರಂ ಆಗಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ ಕುಡುಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಯಾವಾಗ ಕುಡಿತಾರೋ,ಯಾವಾಗ ಕುಡಿಯೋದಿಲ್ವೋ ಗೊತ್ತಿಲ್ಲ. ಅವರು ಹೆಂಡ ಕುಡಿದಾಗ ಒಂದು ಮತಾಡುತ್ತಾರೆ, ಹೆಂಡ ಕುಡಿಯದೇ ಇದ್ದಾಗ ಒಂದು ಮಾತನಾಡುತ್ತಾರೆ ಎಂದು ಕಿಡಿ ಕಾರಿದರು.
ಸಿದ್ದರಾಮಯ್ಯ ಒಬ್ಬ ಮಹಾನ್ ಮೋಸಗಾರ. ಸಿದ್ದರಾಮಯ್ಯ ಅವರ ರಕ್ತದ ಕಣಕಣದಲ್ಲೂ ಮೋಸ ಇದೆ. ಮೊದಲು ಜೆಡಿಎಸ್‍ಗೆ ಮೋಸ ಮಾಡಿದ್ದಾರೆ. ನಂತರ ಶ್ರೀನಿವಾಸ್ ಪ್ರಸಾದ್ ಅವರಿಗೆ ಮೋಸ ಮಾಡಿದ್ದಾರೆ. ಈಗ ಕಾಂಗ್ರೆಸ್‍ಗೂ ಮೋಸ ಮಾಡಲು ಹೊರಟಿದ್ದಾರೆ. ಇಂತಹ ಮೋಸಗಾರ ನಮ್ಮ ಅಧ್ಯಕ್ಷರ ಬಗ್ಗೆ ಏನು ಮಾತನಾಡುತ್ತಾರೆ ಎಂದು ಪ್ರಶ್ನಿಸದ ಈಶ್ವರಪ್ಪ ಅವರು, ಜಮೀರ್ ಅಹ್ಮದ್ ಅವರನ್ನು ಸಿದ್ದರಾಮಯ್ಯ ಹೊಗಳುತ್ತಾರೆ. ನಳಿನ್ ಕುಮಾರ್ ಕಟೀಲ್ ಅವರಂತಹ ದೇಶಭಕ್ತರನ್ನು ಭಯೋತ್ಪಾದಕ ಎಂದು ಕರೆಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಹೈ ಕಮಾಂಡ್ ಸಚಿವರ ರಹಸ್ಯ ವರದಿ ಪಡೆಯುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನನಗಂತು ಗೊತ್ತಿಲ್ಲಪ್ಪ , ನೀವು ಸಿಐಡಿ ಡಿಪಾರ್ಟ್‍ಮೆಂಟ್ ನಲ್ಲಿ ಇರಬಹುದೇನೋ ಎಂದು ಪ್ರಶ್ನಿಸಿದರು.
ಆರ್ ಎಸ್ ಎಸ್ ಮತ್ತು ಬಿಜೆಪಿಯಲ್ಲಿರುವ ಸಿಐಡಿ ಡಿಪಾರ್ಟ್‍ಮೆಂಟ್ ನಲ್ಲಿ ನೀವು ಇರಬಹುದು. ನನಗಂತು ಗೊತ್ತಿಲ್ಲ ಇದೆಲ್ಲ ಸುಳ್ಳು ಸುದ್ದಿ. ಹೈ ಕಮಾಂಡ್ ಯಾವುದೆ ರಹಸ್ಯ ವರದಿ ತರಿಸಿಕೊಂಡಿಲ್ಲ ಎಂದು ಹೇಳಿದರು.