ಸಿದ್ದರಾಮಯ್ಯ ಸಿ.ಎಂ ಆಗಿದ್ದ ವೇಳೆ ದಲಿತರ ಸುಧಾರಣೆಯಾಗಿಲ್ಲ

ಚಾಮರಾಜನಗರ, ನ.12:- ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ದಲಿತರ ಸುಧಾರಣೆಯಾಗಿಲ್ಲ ಎಂದು ಬಿಜೆಪಿ ಜಿಲ್ಲಾ ಎಸ್ಪಿ ಮೋರ್ಚಾ ಅಧ್ಯಕ್ಷ ಕಿನಕಹಳ್ಳಿ ರಾಚಯ್ಯ ಚಾಮರಾಜನಗರಸಲ್ಲಿ ಹೇಳಿದರು.
ಸಿದ್ದರಾಮಯ್ಯ ಅವರು ಕಳೆದ ಒಂದು ವಾರದ ಹಿಂದೆ ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಎಂಬ ಹೇಳಿಕೆ ನೀಡಿದ್ದು ಈ ಹೇಳಿಕೆ ದಲಿತರನ್ನು ಘಾಸಿಗೊಳಿಸಿದೆ.
ಮುಖ್ಯಮಂತ್ರಿ ಯಾಗಿದ್ದಾಗ ದಲಿತರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇನೆ ಎಂದು ಹೇಳುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ 5 ವರ್ಷಗಳ ಅವಧಿಯಲ್ಲಿ ದಲಿತರ ಸುಧಾರಣೆಯಾಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಜವಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ದಲಿತ. ಸಾಮಾಜಿಕ ಹರಿಕಾರ, ಸುಧಾರಕ ಎಂದು ಮಾತನಾಡುತ್ತಾರೆ. ಇವರು ಕಾಂಗ್ರೆಸ್‍ಗೆ ಬಂದ ಮೇಲೆ ಹಲವು ದಲಿತ ನಾಯಕರನ್ನು ತುಳಿಯುವ ಕೆಲಸ ಮಾಡಿದ್ದಾರೆ. ಡಾ.ಜಿ.ಪರಮೇಶ್ವರ್ ಅವರ ಸೋಲಿಗೆ ಕಾರಣ ಯಾರೆಂದು ರಾಜ್ಯದ ಜನತೆಗೆ ಗೊತ್ತಿದೆ. ನಾನು ಒಬ್ಬ ದಲಿತ, ದಲಿತರ ಬಗ್ಗೆ ನನಗೆ ಕಾಳಜಿ ಇದೆ ಎಂದು ಹೇಳುವ ಮೂಲಕ ದಲಿತರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಧಾನ ಕಾರ್ಯದರ್ಶಿ ಮೂತ್ನಾಕೂಡು ಪ್ರಕಾಶ್ ಮಾತನಾಡಿ, ನಾನು ಒಬ್ಬ ದಲಿತ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಹಿಂದೆ ಕುತಂತ್ರ ಅಡಗಿದೆ.
ಇವರು ಕಾಂಗ್ರೆಸ್ ಪಕ್ಷದಲ್ಲಿರುವ ದಲಿತ ನಾಯಕರನ್ನು ಸೋಲಿಸುವ ಪ್ರವೃತ್ತಿ ಮಾಡಿದ್ದಾರೆ. ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ.
ಆಗ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ಬಿಜೆಪಿ ಯಾವಾಗಲೂ ದಲಿತರ ಪರ ಆಲೋಚನೆ ಮಾಡುತ್ತದೆ. ದಲಿತರ ಮೇಲೆ ಪ್ರೀತಿ ಇದ್ದರೆ ಕಾಂಗ್ರೆಸ್ ಈಗಲೇ ದಲಿತ ಮುಖ್ಯಮಂತ್ರಿ ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.