ಸಿದ್ದರಾಮಯ್ಯ ವಿರುದ್ಧ ಬಿಜೆಪಿಯವರ ಟೀಕೆಗೆ ಸಿಡಿದೆದ್ದ ಕಾಂಗ್ರೆಸ್

ದಾವಣಗೆರೆ.ನ.೮;: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯವರು ಟೀಕಿಸುತ್ತಿರುವುದನ್ನು ವಿರೋಧಿಸಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಬಿಜೆಪಿಯವರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸಿಕೊಳ್ಳಲಾಗದೆ ಬಿಜೆಪಿಯವರು ಅವರ ವಿರುದ್ಧ ದಲಿತ ವಿರೋಧಿ ಪಟ್ಟ ಕಟ್ಟಿ ರಾಜ್ಯದ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಮುಂದಾಗಿದ್ದಾರೆ. ಈವರೆಗೂ ಹಾನಗಲ್ ಉಪಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿಯವರು ಈ ರೀತಿಯಾಗಿ ಸಿದ್ದರಾಮಯ್ಯ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸೇರಿದಂತೆ ದೇಶದ ಕೆಲವೆಡೆ ನಡೆದ ಉಪಚುನಾವಣೆಯಲ್ಲಿ ಸಾಕಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಸೋತಿರುವುದರಿಂದ ಬಿಜೆಪಿಯವರು ಕಂಗಾಲಾಗಿದ್ದಾರೆ. ಇದರಿಂದಾಗಿ ವಿರೋಧ ಪಕ್ಷದ ನಾಯಕರ ವಿರುದ್ಧ ಮುಗಿ ಬಿದ್ದಿದ್ದಾರೆ. ಕೂಡಲೇ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿಯವರು ನೀಡುವ ಹೇಳಿಕೆಗಳನ್ನು ನಿಲ್ಲಿಸಬೇಕು. ಇಲ್ಲದ್ದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಎರಡೂವರೆ ಲಕ್ಷ ಪರಿಶಿಷ್ಟರಿಗೆ ವಿವಿಧ ಅಭಿವೃದ್ಧಿ ನಿಗಮದಿಂದ ಪಡೆದಿದ್ದ ೫೮೧ ಕೋಟಿ ರೂ. ಸಾಲಮನ್ನಾ, ಪರಿಶಿಷ್ಟ ಸರ್ಕಾರಿ ನೌಕರರಿಗೆ ಮುಂಬಡ್ತಿ ಸೌಲಭ್ಯ, ಪರಿಶಿಷ್ಟರಿಗೆ ಸರ್ಕಾರಿ ಕಾಮಗಾರಿಗಳ ಗುತ್ತಿಗೆಗೆ ಶೇ.೧೮ರಷ್ಟು ಮೀಸಲಾತಿ, ರಾಜ್ಯದ ಹೋಬಳಿಗೊಂದು ೨೭೦ ಪರಿಶಿಷ್ಟ ಜಾತಿ, ಪಂಗಡದ ವಸತಿ ಶಾಲೆ ಸೇರಿದಂತೆ ದಲಿತರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿ ಅವರಿಗೆ ತಲುಪಿಸಿದ್ದಾರೆ. ಅಂತಹವರು ದಲಿತ ವಿರೋಧಿಯಾಗಲು ಹೇಗೆ ಸಾಧ್ಯ. ಹಾನಗಲ್ ಉಪಚುನಾವಣೆಯಲ್ಲಿ ಸೋಲಿನ ಕಹಿಯನ್ನು ಸಹಿಸಿಕೊಳ್ಳಲಾಗದೆ ಅವರಿಗೆ ದಲಿತ ವಿರೋದ್ಧಿ ಪಟ್ಟ ಕಟ್ಟಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಕಾಂಗ್ರೆಸ್ ಮುಖಂಡರಾದ ಗೌಡ್ರು ಚನ್ನಬಸಪ್ಪ, ಎಲ್.ಎಂ.ಎಚ್.ಸಾಗರ್, ಕೆ.ಜಿ.ಶಿವಕುಮಾರ್, ಅನಿತಾ ಬಾಯಿ, ಸುಧಾ ಹಿಟ್ಟುಗುಡಿ ಮಂಜುನಾಥ್, ನಾಗರಾಜ್ ನಾಯ್ಕ್, ಡಾ.ವೈ.ರಾಮಪ್ಪ, ರಂಗನಾಥ್, ಜಮ್ಮೆನಹಳ್ಳಿ ನಾಗರಾಜ್, ಚನ್ನಬಸವಣ್ಣ, ನೀಲಗಿರಿಯಪ್ಪ, ಅಬ್ದುಲ್ ಜಬ್ಬಾರ್, ಅಣ್ಣಪ್ಪ, ದ್ರಾಕ್ಷಣಮ್ಮ, ರಾಜೇಶ್ವರಿ, ಜಯಶ್ರೀ, ಗೀತಾ ಚಂದ್ರಶೇಖರ್, ಆಶಾ ಮುರುಳಿ, ಮಂಗಳಮ್ಮ, ಗೀತಾ ರಾಜ್‌ಕುಮಾರ್, ಗಡಿಗುಡಾಳ್ ಮಂಜುನಾಥ್, ಬಿ.ಎಂ.ಈಶ್ವರಪ್ಪ, ಶುಭಾ ಮಂಗಳ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.