ಸಿದ್ದರಾಮಯ್ಯ ಬಂದರೆ ಸೋಲು ಖಚಿತ-ವರ್ತೂರು ಪ್ರಕಾಶ್

ಕೋಲಾರ,ನ,೨೨- ಜಿಲ್ಲೆಯ ಕಾಂಗ್ರೆಸ್ ‘ಮನೆಯೊಂದು ಒಂಬತ್ತು ಬಾಗಿಲು ಆಗಿಬಿಟ್ಟಿದೆ, ಇಲ್ಲಿನ ಘಟಬಂಧನ್ ಮುಖಂಡರನ್ನು ನಂಬಿ ಬಂದರೆ ಸೋಲು ಖಚಿತ ನೀವು ನಮ್ಮ ಕುರುಬ ಸಮುದಾಯದ ನಾಯಕರಿದ್ದೀರಿ, ಇವರನ್ನು ನಂಬಿ ಕೋಲಾರಕ್ಕೆ ಬರಬೇಡಿ, ನೀವು ಸೋತರೆ ಸಮುದಾಯಕ್ಕೆ ಅವಮಾನ ಎಂದು ಸಿದ್ದರಾಮಯ್ಯನವರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಸಲಹೆ ನೀಡಿದರು.
ನಗರದ ಬಸ್‌ನಿಲ್ದಾಣ ವೃತ್ತದಲ್ಲಿ ಅಂತರಗಂಗೆ ಕಡೆ ಕಾರ್ತಿಕ ಸೋಮವಾರದ ಜಾತ್ರೆ ಅಂಗವಾಗಿ ಬಜರಂಗದಳದಿಂದ ಹಮ್ಮಿಕೊಂಡಿದ್ದ ಉಚಿತ ಬಸ್‌ಸೇವೆಗೆ ಚಾಲನೆ ನೀಡಿದ ನಂತರ ಬಜರಂಗದಳ ಸದಸ್ವತ್ವ ಸ್ವೀಕರಿಸಿ, ಮಾಧ್ಯಮದೊಂದಿಗೆ ಅವರು ಮಾತನಾಡುತ್ತಿದ್ದರು.
ಸಿದ್ದರಾಮಯ್ಯ ಬಂದು ಹೋದ ನಂತರ ಕಾಂಗ್ರೆಸ್ ಘಟಬಂಧನ್ ಛಿದ್ರವಾಗಿದೆ, ಸಿದ್ದರಾಮಯ್ಯರನ್ನು ಸ್ವಾಗತಿಸುತ್ತಲೇ ಟಿಕೆಟ್‌ಗಾಗಿ ಡಿ.ಕೆ.ಶಿವಕುಮಾರ್ ಅಭಿಮಾನಿ ಶ್ರೀನಿವಾಸ್, ರಮೇಶ್‌ಕುಮಾರ್ ಶಿಷ್ಯ ಬ್ಯಾಲಹಳ್ಳಿ ಗೋವಿಂದಗೌಡ, ಕೆಎಚ್.ಮುನಿಯಪ್ಪ ಶಿಷ್ಯರಾದ ಊರುಬಾಗಿಲು ಶ್ರೀನಿವಾಸ್, ಎಲ್.ಎ.ಮಂಜುನಾಥ್ ಸೇರಿದಂತೆ ಏಳೆಂಟು ಮಂದಿ ಅರ್ಜಿ ಹಾಕಿದ್ದಾರೆ ಎಂದರು.
ಸಿದ್ದರಾಮಯ್ಯನವರು ಕೋಲಾರಕ್ಕೆ ಬಂದರೆ ಈ ಏಳೆಂಟು ಮಂದಿಯೂ ಒಂದಾಗಿ ಸೋಲಿಸೋದು ಗ್ಯಾರೆಂಟಿ, ಸಿದ್ದರಾಮಯ್ಯ ನಮ್ಮ ಸಮುದಾಯದ ನಾಯಕರಾಗಿದ್ದಾರೆ, ಈ ಅವಮಾನಕ್ಕೆ ತುತ್ತಾಗದಿರಿ, ಕೋಲಾರದಲ್ಲಿ ಇವರನ್ನು ನಂಬಿ ಬರಬೇಡಿ ಎಂದು ಸಲಹೆ ನೀಡಿದರು.
ಬಜರಂಗದಳ ಸದಸ್ಯತ್ವಸ್ವೀಕಾರ
ಇದೇ ಸಂದರ್ಭದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್, ಬಂಕ್ ಮಂಜುನಾಥ್ ಬಜರಂಗದಳ ಸದಸ್ಯತ್ವ ಸ್ವೀಕರಿಸಿದ್ದು, ನಮ್ಮ ೨೫ ಮುಖಂಡರು ಸದಸ್ಯತ್ವ ಸ್ವೀಕರಿಸಲಿದ್ದಾರೆ, ಧಾರ್ಮಿಕ ಕಾರ್ಯಗಳಿಗೆ ನಿಮ್ಮೊಂದಿಗೆ ಇರುತ್ತೇವೆ ಎಂದು ತಿಳಿಸಿದರು.