ಸಿದ್ದರಾಮಯ್ಯ ಜನ್ಮ ದಿನೋತ್ಸವ: ಕಾಂಗ್ರೆಸ್‌ನಿಂದ ಪೂರ್ವಭಾವಿ ಸಭೆ

ಮಂಗಳೂರು, ಜು.೨೦- ಮಾಜಿ ಮುಖ್ಯಮಂತ್ರಿ, ರಾಜ್ಯ ವಿಧಾನ ಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ೭೫ನೆ ಜನ್ಮದಿನೋತ್ಸವ ಅಮೃತ ಮಹೋತ್ಸವವು ಆ.೩ರಂದು ದಾವಣೆಗೆರೆಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್‌ನಿಂದ ಪೂರ್ವಭಾವಿ ಸಭೆ ನಡೆಯಿತು.
ಸಮಾವೇಶಕ್ಕೆ ಪ್ರತೀ ವಿಧಾನಸಭಾ ಕ್ಷೇತ್ರದ ಬ್ಲಾಕ್‌ಗಳಿಂದ ಕಾರ್ಯಕರ್ತರು, ನಾಯಕರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಲು ಮತ್ತು ಜಿಲ್ಲೆಯಿಂದ ಕನಿಷ್ಟ ೫೦ ಬಸ್‌ಗಳಲ್ಲಿ ತೆರಳುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ನಿಟ್ಟಿನಲ್ಲಿ ಪ್ರತೀ ವಿಧಾನ ಸಭಾ ಕ್ಷೇತ್ರಕ್ಕೆ ಉಸ್ತುವಾರಿಗಳನ್ನು ನೇಮಿಸಲಾಯಿತು. ಸೋನಿಯಾ ಗಾಂಧಿಗೆ ಇ.ಡಿ.ಕಿರುಕುಳ ನೀಡುತ್ತಿರುವ ವಿರುದ್ಧ ಜು.೨೨ರಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಹಾಗೂ ಆ.೧೫ರಂದು ಸ್ವಾತಂತ್ರ್ಯೋತ್ಸವದಂದು ಬ್ಲಾಕ್ ಮಟ್ಟದಲ್ಲಿ ೧೫ ಕಿ.ಮೀ ಪಾದಯಾತ್ರೆ ನಡೆಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಚಂದ್ರ ಜೈನ್, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಮೊಯ್ದೀನ್ ಬಾವ, ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೊ, ಐವನ್ ಡಿಸೋಜ, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ, ರಕ್ಷಿತ್ ಶಿವರಾಂ, ಕೃಪಾ ಆಳ್ವ, ಎಐಸಿಸಿ ಸದಸ್ಯೆ ಕವಿತಾ ಸನಿಲ್, ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಹರಿನಾಥ್, ಮತ್ತಿತರರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ್ ಉಳ್ಳಾಲ್ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕಾಧ್ಯಕ್ಷ ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು.