ಸಿದ್ದರಾಮಯ್ಯ ಜನ್ಮದಿನ ಅಮೃತ ಮಹೋತ್ಸವಕ್ಕೆ ಪೂರ್ವಭಾವಿ ಸಿದ್ದತೆ

ಅರಸೀಕೆರೆ, ಆ. ೧- ದಾವಣಗೆರೆಯಲ್ಲಿ ಆ. ೩ ರಂದು ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ೭೫ನೇ ಜನ್ಮ ದಿನೋತ್ಸವಕ್ಕೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಗಳಾಪುರ ನಾಗರಾಜ್ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಎತ್ತಿನಹೊಳೆ ಯೋಜನೆ ಸೇರಿದಂತೆ ವಿವಿಧ ಶಾಶ್ವತ ಯೋಜನೆಗಳ ಅನುಷ್ಠಾನಕ್ಕೆ ಸಾವಿರಾರು ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರಿಗೆ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ಕೋಟ್ಯಂತರ ಅಭಿಮಾನಿಗಳ ಪಡೆಯೇ ಇದೆ. ರಸ್ತೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ಗ್ರಾಮೀಣ ಪ್ರದೇಶಗಳ ಅಭಿವೃದ್ದಿ ಸೇರಿದಂತೆ ಕೆಳ ಹಂತದ ಸಮುಧಾಯದವರಿಗೂ ಸಾಮೂಹಿಕ ನ್ಯಾಯವನ್ನು ನೀಡಿದ್ದಾರೆ. ಇವರ ೭೫ ನೇ ಜನ್ಮ ದಿನದ ಅಂಗವಾಗಿ ದಾವಣಗೆರೆಯಲ್ಲಿ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕ್ಷೇತ್ರದಲ್ಲಿ ಈಗಾಗಲೇ ಹಳ್ಳಿ ಹಳ್ಳಿಗಳಿಂದ ಜನರು ದಾವಣಗೆರೆಗೆ ಪ್ರಯಾಣ ಬೆಳೆಸಲು ಪೂರ್ವ ಸಿದ್ದತೆಯನ್ನು ಮಾಡಿಕೊಂಡಿದ್ದಾರೆ ಎಂದರು.
ಜಿ.ಪಂ. ಮಾಜಿ ಸದಸ್ಯ ಬಾಣಾವರ ಆಶೋಕ್ ಮಾತನಾಡಿ, ಸಿದ್ದರಾಮಯ್ಯನವರ ಜನ್ಮ ಮಹೋತ್ಸವ ಯಾವುದೇ ಒಂದು ನಿರ್ಧಿಷ್ಟ ಸಮುಧಾಯಕ್ಕೆ ಅಥವಾ ಪಕ್ಷಕ್ಕೆ ಸೀಮಿತವಾಗಿಲ್ಲ. ಪಕ್ಷಾತೀತವಾಗಿ ಜೆಡಿಎಸ್, ಬಿಜೆಪಿ ಮತ್ತು ಇನ್ನಿತರೆ ಪಕ್ಷಗಳು ಈ ಕಾರ್ಯಕ್ರಮಕ್ಕೆ ಸಂಪೂರ್ಣ ಭಾಗಿಗಳಾಗಲಿದ್ದಾರೆ. ನಮ್ಮ ಕ್ಷೇತ್ರಕ್ಕೆ ಈಗಾಗಲೇ ಹದಿನೈದು ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ನೊಂದಣಿ ಮಾಡಲಾಗಿದ್ದು, ಸುಮಾರು ೫೦ ಕ್ಕೂ ಹೆಚ್ಚು ಬಸ್‌ಗಳನ್ನು ನಾವುಗಳು ವ್ಯವಸ್ಥೆ ಮಾಡಿದ್ದೇವೆ ಎಂದರು.
ಗ್ರಾಮೀಣ ಪ್ರದೇಶದ ಜನತೆ ವಾಹನ ವ್ಯವಸ್ಥೆ ಅವಶ್ಯಕತೆ ಇದ್ದಲ್ಲಿ ನಮ್ಮನ್ನು ಸಂಪರ್ಕಿಸಬಹುದಾಗಿದೆ. ಸಾವಿರಾರು ಅಭಿಮಾನಿಗಳು ಸ್ವಯಂ ಪ್ರೇರಿತವಾಗಿ ವಾಹನಗಳ ವ್ಯವಸ್ಥೆ ಮಾಡಿಕೊಂಡು ತಂಡೋಪ ತಂಡವಾಗಿ ಮಹೋತ್ಸವಕ್ಕೆ ಹೊರಟಿದ್ದಾರೆ. ನಮ್ಮ ತಾಲ್ಲೂಕಿನಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸಮಾವೇಶಕ್ಕೆ ಹೊರಡಲಿದ್ದಾರೆ ಎಂದರು.
ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ತೋಂಡಿಗನಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ಸಿದ್ದರಾಮಯ್ಯನವರು ಕುರುಬ ಸಮಾಜಕ್ಕೆ ಮಾತ್ರ ಸೀಮಿತವಾಗಿರದೇ ಎಲ್ಲ ಸಮಾಜಗಳ ಅಭಿವೃದ್ದಿಗೆ ಶ್ರಮಿಸಿದವರಾಗಿದ್ದಾರೆ. ಇವರು ತಮ್ಮ ಅಧಿಕಾರದ ಅವಧಿಯಲ್ಲಿ ನೀಡಿರುವ ಕೊಡುಗೆ ಅನನ್ಯವಾಗಿದ್ದು, ಇವರ ಜನ್ಮ ದಿನದ ಸಂಭ್ರಮಾಚರಣೆಗೆ ರಾಜ್ಯಾದ್ಯಂತ ಸಾಗರೋಪಾಧಿಯಲ್ಲಿ ಎಲ್ಲ ವರ್ಗದ ಜನತೆ ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಮಾಶಂಕರ್, ಗಂಡಸಿ ಜಗದೀಶ್, ಪ್ರಸನ್ನ, ನಗರಸಭೆ ಸದಸ್ಯ ಈಶ್ವರ್ ಮತ್ತಿತರರು ಉಪಸ್ಥಿತರಿದ್ದರು.