ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ಶೋಚನಿಯ

ಕೋಲಾರ, ನ. ೧೫- ಸಿದ್ದರಾಮಯ್ಯ ಓರ್ವ ಮಾಜಿ ಸಿಎಂ ಆದರೂ, ಮುಂದಿನ ಚುನಾವಣೆಗೆ ಕ್ಷೇತ್ರ ಹುಡುಕಾಟದಲ್ಲಿ ತೊಡಗಿರುವುದು ನಿಜಕ್ಕೂ ಶೋಚನೀಯ. ಕೋಲಾರಕ್ಕೆ ಒಂದಲ್ಲ ಐವತ್ತು ಬಾರಿ ಬೇಕಾದರೂ ಬರಲಿ. ಅವರನ್ನು ನೂರಕ್ಕೆ ನೂರು ಸೋಲಿಸಿ ಮನೆಗೆ ಕಳುಹಿಸುವುದು ಗ್ಯಾರಂಟಿ ಎಂದು ಸಂಸದ ಎಸ್.ಮುನಿಸ್ವಾಮಿ ಘೋಷಿಸಿದರು.
ನಗರದ ರಂಗಮಂದಿರದಲ್ಲಿ ೨೦೨೨-೨೩ನೇ ಸಾಲಿನ ವಿವೇಕ ಯೋಜನೆಯಡಿ ನೂತನ ಶಾಲಾ ಕೊಠಡಿಗಳ ಶಂಕುಸ್ಥಾಪನೆ ಹಾಗೂ ಮಕ್ಕಳ ದಿನಾಚರಣೆ ಕಾಯಕ್ರಮದ ನಂತರ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು.
ಸಿದ್ದರಾಮಯ್ಯ ಕೋಲಾರ ಭೇಟಿ ವಿಷಯವಾಗಿ ನಗರದಲ್ಲಿ ಪ್ರತಿಕ್ರಿಯಿಸಿ ತಮ್ಮ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲೇ ಸಿದ್ದರಾಮಯ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಬಾದಾಮಿ ಕ್ಷೇತ್ರದಲ್ಲಿ ೧೩೦೦ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿಯಾಗಿ ಸ್ವಕ್ಷೇತ್ರದಲ್ಲಿ ಹಾಗೂ ಬಾದಾಮಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಇದರಿಂದಲೇ ಅಲ್ಲಿನ ಜನಕ್ಕೆ ಹೆದರಿ ಹೊಸ ಕ್ಷೇತ್ರ ಹುಡುಕುತ್ತಿದ್ದಾರೆ ಎಂದು ಛೇಡಿಸಿದರು.
ಕೋಲಾರ ಜಿಲ್ಲೆಯ ಕೆಲ ನಾಯಕರು ಮಾತ್ರ ಸೋಲುವ ಭಯದಿಂದ ಸಿದ್ದರಾಮಯ್ಯರನ್ನು ಕೋಲಾರಕ್ಕೆ ಕರೆಯುತ್ತಿದ್ದಾರೆ. ಭಾನುವಾರ ಸಿದ್ದರಾಮಯ್ಯ ಕೋಲಾರ ಕ್ಷೇತ್ರಕ್ಕೆ ಬಂದಾಗ ಘಟಬಂದನ್ ಬಿಟ್ಟರೆ ಅನೇಕ ನಾಯಕರೇ ಬಂದಿರಲಿಲ್ಲ. ಕೆ.ಹೆಚ್.ಮುನಿಯಪ್ಪ, ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಕಲಾ ಹಾಗೂ ಮುಳಬಾಗಿಲಿನ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸಿದ್ದರಾಮಯ್ಯ ಜೊತೆ ಬಂದಿಲ್ಲ ಎಂದರು.
ಕೊತ್ತೂರು ಮಂಜುನಾಥ್‌ಗೆ ವಂಚನೆ-
ವೇಮಗಲ್‌ನ ಸೀತಿ ಬೆಟ್ಟಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಅದನ್ನು ಅಭಿವೃದ್ಧಿಪಡಿಸಿದ್ದು ನಮ್ಮ ಸರ್ಕಾರ. ನರಸಾಪುರ ಕೆರೆ ವೀಕ್ಷಣೆ ಮಾಡಿದ್ದಾರೆ. ಆ ಕೆರೆಯನ್ನೂ ನಾವು ಅಭಿವೃದ್ಧಿ ಪಡಿಸಿದ್ದೇವೆ. ಭಾನುವಾರ ಸಿದ್ದರಾಮಯ್ಯ ಓಡಾಡಿದ್ದ ರಸ್ತೆಗಳೆಲ್ಲಾ ಡೆವಲಪ್ಮೆಂಟ್ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ ಎಂದರು.
ಒಬ್ಬರು ಸರ್ಕಾರಿ ಬೆಟ್ಟಗಳನ್ನು, ಜಮೀನುಗಳನ್ನು ನುಂಗಿ ಮೈ ಮೇಲೆ ಕೇಸ್‌ಗಳು ಹಾಕಿಸಿಕೊಂಡಿದ್ದಾರೆ. ಎಲ್ಲಿಯೂ ಹೋಗಬಾರದು ಎಂದಿದ್ದರೂ ಸಿದ್ದರಾಮಯ್ಯ ಜೊತೆ ಓಡಾಡುತ್ತಿದ್ದಾರೆ. ಮುಬಾರಕ್ ಎಂಬುವರೂ ಸಹ ಕೋಲಾರವನ್ನು ನುಂಗಿ ನೀರು ಕುಡಿದಿದ್ದಾರೆ. ಸಿದ್ದರಾಮಯ್ಯ ಕೋಲಾರ ಭೇಟಿ ಕಾರ್ಯಕ್ರಮಕ್ಕೆ ಚಿಂತಾಮಣಿ, ಹೊಸಕೋಟೆ ಸೇರಿದಂತೆ ಹಲವೆಡೆಯಿಂದ ಜನ ಕರೆತಂದಿದ್ದಾರೆ ಎಂದು ತಿಳಿಸಿದರು.
ಅಹಿಂದ ಹಾಗೂ ದಲಿತ ವಿರೋದಿ ಯಾರಾದರೂ ಇದ್ದಾರೆ ಅಂದರೆ ಅದು ಸಿದ್ದರಾಮಯ್ಯ ಮಾತ್ರ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌ರನ್ನೇ ಸೋಲಿಸಲು ಇವರು ಮಾಡಿದ ತಂತ್ರ ಯಾರಿಗೆ ಗೊತ್ತಿಲ್ಲ, ಇನ್ನು ಅವರದೇ ಕುರುಬ ಸಮುದಾಯದ ಎಂಟಿಬಿ ನಾಗರಾಜ್, ವಿಶ್ವನಾಥ್, ಶಂಕರ್ ಸೇರಿದಂತೆ ಹಲವರನ್ನು ಸಿದ್ದರಾಮಯ್ಯ ಅವರೇ ಸೋಲಿಸಿದ್ದಾರೆ ಎಂದರು.
ಇನ್ನು ಜಾತಿ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಗೆಲ್ಲಲು ಸಾಧ್ಯವಾಗುವುದಿಲ್ಲ. ಕುರುಬರೆಲ್ಲಾ ಸಿದ್ದರಾಮಯ್ಯಗೆ ಮತ ಹಾಕುವುದಿಲ್ಲ. ಕಾಂಗ್ರೆಸ್ ಪಕ್ಷದವರು ವೋಟ್ ಬ್ಯಾಂಕ್‌ಗೋಸ್ಕರ ಸಮಯಕ್ಕೆ ತಕ್ಕಂತೆ ಮಾತನಾಡುತ್ತಾರೆ. ಹಿಜಾಬ್ ಆಗಬಹುದು, ಟಿಪ್ಪು ಸುಲ್ತಾನ್ ಜಯಂತಿ, ಕೋಲಾರದ ಕ್ಲಾಕ್ ಟವರ ಬಗ್ಗೆ ಏನು ಮಾತಾಡಿದ್ದಾರೆ ಅಂತ ಜನರಿಗೆ ಗೊತ್ತು. ಸಿದ್ದರಾಮಯ್ಯ ದೇಶದ ಪರವಾಗಿ ಇಲ್ಲ. ವೋಟ್ ಬ್ಯಾಂಕ್‌ಗೋಸ್ಕರ ಸಮಯಕ್ಕೆ ತಕ್ಕಂತೆ ಮಾತನಾಡುತ್ತಾರೆ ಎಂದು ಟೀಕಿಸಿದರು.