ಸಿದ್ದರಾಮಯ್ಯ ಕೋಲಾರದಲ್ಲೇ ಸ್ಪರ್ಧಿಸುವಂತೆ ಒತ್ತಾಯ

ಕೋಲಾರ,ಮಾ-೨೩- ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲೇ ಸ್ಪರ್ಧಿಸಬೇಕೆಂದು ಜಿಲ್ಲೆಯ ದಲಿತ ಮುಖಂಡರು ಆಗ್ರಹಿಸಿದರು.
ಮಾರ್ಚ್೨೧ರಂದು ಬೆಂಗಳೂರಿಗೆ ತೆರಳಿ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದು, ’ಸಿದ್ದರಾಮಯ್ಯ ನಯಾಪೈಸೆ ಖರ್ಚು ಮಾಡುವುದು ಬೇಡ. ನಾವೇ ಆಸ್ತಿ ಮಾರಿ ಅವರ ಚುನಾವಣೆ ಖರ್ಚು ವೆಚ್ಚ ನೋಡಿಕೊಳ್ಳುತ್ತೇವೆ’ ಎಂದರು.
ಭಾನುವಾರ ಇಲ್ಲಿನ ನಚಿಕೇತನ ನಿಲಯದಲ್ಲಿ ದಲಿತ ಮುಖಂಡರು ಸಭೆ ನಡೆಸಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ಸಿದ್ದರಾಮಯ್ಯ ಕೋಲಾರದಲ್ಲೇ ಸ್ಪರ್ಧಿಸಬೇಕು. ಈ ವಿಚಾರದಲ್ಲಿ ಹೈಕಮಾಂಡ್ಹಸಿರು ನಿಶಾನೆ ತೋರಬೇಕು. ಸಿದ್ದರಾಮಯ್ಯ ದಲಿತರ ಆಶಾಕಿರಣ. ಸಂವಿಧಾನ ಮುಟ್ಟಿದರೆ ರಕ್ತಪಾತ ಆಗುತ್ತದೆ ಎಂಬ ಎಚ್ಚರಿಕೆ ನೀಡಿದವರು, ಸಂವಿಧಾನ ರಕ್ಷಕ’ ಎಂದೆಲ್ಲಾ ಘೋಷಣೆ ಕೂಗಿದರು.
ದಲಿತ ಮುಖಂಡ ವಕ್ಕಲೇರಿ ರಾಜಪ್ಪ ಮಾತನಾಡಿ, ’ಕೆ.ಸಿ.ರೆಡ್ಡಿ ಬಳಿಕ ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ. ಯಾವುದೇ ಅಭಿವೃದ್ಧಿ ಇಲ್ಲದೆ ಕೋಲಾರ ಮೂಲೆಗುಂಪಾಗಿದೆ. ದಲಿತರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಥಳೀಯಲ್ಲಿ ಕಾಂಗ್ರೆಸ್ನಲ್ಲಿ ಪ್ರಮುಖ ನಾಯಕರಿಲ್ಲ. ಹೀಗಾಗಿ, ಸಿದ್ದರಾಮಯ್ಯ ಬರುವ ವಿಷಯ ತಿಳಿದು ನಮಗೆಲ್ಲಾ ಖುಷಿಯಾಗಿತ್ತು. ಆದರೆ, ಅವರು ಸ್ಪರ್ಧೆ ಮಾಡುತ್ತಿಲ್ಲ ಎಂಬ ವಿಚಾರ ಘಾಸಿ ಉಂಟು ಮಾಡಿದೆ’ ಎಂದರು.
ಕ್ಷೇತ್ರದ ನಾಲ್ಕು ಸಾವಿರಕ್ಕೂ ಅಧಿಕ ದಲಿತರು ಮಂಗಳವಾರ ಬೆಳಿಗ್ಗೆಯೇ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಪ್ರತಿಭಟನೆ ನಡೆಸುತ್ತೇವೆ. ಅವರು ಸ್ಪರ್ಧೆಗೆ ಒಪ್ಪುವವರೆಗೆ ಮನೆ ಬಿಟ್ಟು ಬರಲ್ಲ ಎಂದು ಘೋಷಿಸಿದರು.
ನಗರಸಭೆ ಸದಸ್ಯ ಅಂಬರೀಷ್ ಮಾತನಾಡಿ, ’ಸುನಿಲ್ಕುನಗೋಲು ಎಂಬ ವ್ಯಕ್ತಿಯು ಮಾಡಿರುವ ಸಮೀಕ್ಷೆ ಬಗ್ಗೆ ನಮಗೆ ಅನುಮಾನವಿದೆ. ಅವರು ಸಮೀಕ್ಷೆ ಮಾಡುವ ವೇಳೆಯಲ್ಲಿ ಗ್ರಾಮಾಂತರದಲ್ಲಿ ಇನ್ನೂ ಪಕ್ಷದ ಸಂಘಟನೆ ನಡೆದಿರಲಿಲ್ಲ. ಅವರು ಈಗ ಬಂದು ಸಮೀಕ್ಷೆ ಮಾಡಬೇಕಿತ್ತು’ ಎಂದರು.
ದಲಿತ ಮುಖಂಡರಾದ ವರದೇನಹಳ್ಳಿ ವೆಂಕಟೇಶ್, ಉಮಾಶಂಕರ್, ನಗರಸಭೆ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ದಲಿತ ಸಂಘಟನೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.