ಸಿದ್ದರಾಮಯ್ಯ ಕೃತಜ್ಞತೆ ಇಲ್ಲದ ನಾಯಕ, ವಚನ ಭ್ರಷ್ಟ: ವಿಶ್ವನಾಥ್

Congress leader H Vishwanath who left Congress Party at Meet the Press programme at Press Club in Bengaluru on Friday. -KPN ### Meet the Press H Vishwanath

ಸಂಜೆವಾಣಿ ನ್ಯೂಸ್
ಮೈಸೂರು,ಏ.19:- ಸಿಎಂ ಸಿದ್ದರಾಮಯ್ಯ ಕೃತಜ್ಞತೆ ಇಲ್ಲದ ನಾಯಕ, ವಚನ ಭ್ರಷ್ಟ ಎಂದು ವಾಗ್ದಾಳಿ ನಡೆಸಿರುವ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಖಲೀಮುಲ್ಲಾ ಖಾನ್ ಜೊತೆ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಚ್ ವಿಶ್ವನಾಥ್, ಖಲೀಮುಲ್ಲಾ ಖಾನ್ ರಿಂದ ಸಿದ್ದರಾಮಯ್ಯಗೆ ರಾಜಕೀಯ ಪುನರ್ಜನ್ಮ ಸಿಕ್ಕಿತು. ಕಾಂಗ್ರೆಸ್ ನಿಂದ ಹೊರಬಂದಿದ್ದ ಖಲೀಮುಲ್ಲಾ ಖಾನ್ 2006ರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಖಲೀಮುಲ್ಲಾ ಖಾನ್ ಕನಿಷ್ಠ ಹತ್ತು ಸಾವಿರ ಮತ ಪಡೆಯುವ ಸಾಧ್ಯತೆಯಿತ್ತು. ಹಾಗಾಗಿ ಖಲೀಮುಲ್ಲಾ ಖಾನ್ ಬೆಂಬಲಕ್ಕಾಗಿ ಸಿಎಂ ಆಗಿದ್ದ ಹೆಚ್.ಡಿ ಕುಮಾರಸ್ವಾಮಿ ಮುಂದಾಗಿದ್ದರು. ಕಾಂಗ್ರೆಸ್ ನವರು ಮನವಿ ಮಾಡಿದ ಮೇರೆಗೆ ಖಲೀಮುಲ್ಲಾ ಖಾನ್ ಕಾಂಗ್ರೆಸ್ ಬೆಂಬಲಿಸಿದರು. ಆದರೆ ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆದರೂ ಕೂಡ ಖಲೀಮುಲ್ಲಾ ಖಾನ್ ಗೆ ಸೂಕ್ತ ಸ್ಥಾನಮಾನ ನೀಡಿಲ್ಲ. ಹಾಗಾಗಿ ಸಿದ್ದರಾಮಯ್ಯ ವಚನಭ್ರಷ್ಟ, ಕೃತಜ್ಞತೆ ಇಲ್ಲದ ನಾಯಕ, ಹತ್ತಿದ ಏಣಿಯನ್ನೇ ಒದೆಯುವ ಗುಂಪಿಗೆ ಸೇರಿದವರು ಎಂದು ಹರಿಹಾಯ್ದರು.
ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತಗಳಿಸಿ ಅಧಿಕಾರಕ್ಕೆ ಬರಲಿದೆ. ಮೋದಿ ಮೂರನೇ ಬಾರಿ ಪ್ರಧಾನಿಯಾಗಲಿದ್ದಾರೆ.
ದೇಶದ ದೊಡ್ಡ ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ. ಈ ಬಾರಿ ಅತ್ಯಂತ ಕಡಿಮೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿದೆ. ಇನ್ನೂ ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ.? ಎಂದು ಎಚ್ ವಿಶ್ವನಾಥ್ ಪ್ರಶ್ನಿಸಿದರು.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇತ್ತೀಚೆಗೆ ಗ್ಯಾರಂಟಿ ಕುರಿತು ನೀಡಿದ್ದ ಹೇಳಿಕೆ ವಿವಾದಕ್ಕೀಡಾದ ಹಿನ್ನೆಲೆ ಈ ಕುರಿತು ಮಾತನಾಡಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್, ಈ ಹಿಂದೆ ನೀವು ಗರ್ಗೇಶ್ವರಿಯಲ್ಲಿ ಮಹಿಳೆಯ ಸೆರಗು ಎಳೆದಿದ್ದು ಮರೆತು ಹೋಯಿತಾ ಸಿದ್ದರಾಮಯ್ಯನವರೇ!. ಆಗ ನೀವು ಮಾಡಿದ್ದು ಸರಿಯಾ? ಈಗ ಕುಮಾರಸ್ವಾಮಿ ಆಡಿದ್ದ ಮಾತಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೂಡ ಯಾಚಿಸಿದ್ದಾರೆ. ಆದರೂ ಏಕೆ ಅದೇ ವಿಚಾರ ಮುಂದಿಟ್ಟುಕೊಂಡು ಗಾಯದ ಮೇಲೆ ಹೊಡೆದು ಹೊಡೆದು ದೊಡ್ಡದು ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.