ಸಂಜೆವಾಣಿ ನ್ಯೂಸ್
ಮೈಸೂರು ನ 05: ಸಿದ್ದರಾಮಯ್ಯ ಕುರುಬರಿಗೆ, ಒಕ್ಕಲಿಗರಿಗೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅನ್ನೋದು ಕೆಲ ಶಾಸಕರ ಆಸೆಯಾಗಿದ್ದು, ಇನ್ನು ಕೆಲವರು ಪ್ರಿಯಾಂಕ್ ಖರ್ಗೆ, ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕು ಅಂತಾ ಹೇಳುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ. ನನ್ನದೊಂದು ಸಲಹೆ ನಾನು ಪ್ರಧಾನ ಮಂತ್ರಿಗೆ ಪತ್ರ ಬರೆಯಬೇಕೋ ಗೊತ್ತಿಲ್ಲ. ಒಂದೊಂದು ಜಾತಿಗೆ ಒಂದೋ ಎರಡೋ ಮುಖ್ಯಮಂತ್ರಿ ಕೊಟ್ಟುಬಿಡಿ ಅನ್ನಬೇಕು ಅಂದುಕೊಂಡಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬರ ಇದೆ. ರೈತರ ಆತ್ಮಹತ್ಯೆಗೆ ಲೆಕ್ಕ ಸಿಕ್ತಾ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಇದೆ. ಒಬ್ಬನೇ ಒಬ್ಬ ಉಸ್ತುವಾರಿ ಸಚಿವ ರೈತರ ಸಮಸ್ಯೆ ಕೇಳಿಲ್ಲ. ಬೆಳೆ ಪರಿಹಾರಕ್ಕಾಗಲಿ, ಬರ ಪರಿಹಾರಕ್ಕಾಗಲಿ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿಗಳಲ್ಲಿ ಬಸ್ ಮಾತ್ರ ಓಡಾಡುತ್ತಿದೆ. ಇನ್ಯಾವ ಗ್ಯಾರಂಟಿಯೂ ಯಶಸ್ವಿ ಆಗಿಲ್ಲ. ರಾಜ್ಯದ ಜನರಿಗೆ ಮೋಸ ಮಾಡಿ ಆಡಳಿತ ಮಾಡ್ತಿದ್ದೀರಾ? ಒಂದು ಕಡೆ ಸಿದ್ದರಾಮಯ್ಯ ಕಾಂತರಾಜು ವರದಿ ಜಾರಿಗೆ ತರ್ತೀವಿ ಅಂತಾರೆ. ಇನ್ನೊಂದು ಕಡೆ ಒಕ್ಕಲಿಗರ ನೇತೃತ್ವದಲ್ಲಿ ಡಿಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡಲ್ಲ ಅಂತಾರೆ. ಒಂದೇ ಪಕ್ಷದ ಸರ್ಕಾರದಲ್ಲಿ ಸಿಎಂ, ಡಿಸಿಎಂ ಬೇರೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಲೀಡರ್ ಲೆಸ್, ಜೆಡಿಎಸ್ ಪೀಪಲ್ ಲೆಸ್ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಡೀ ದೇಶದಲ್ಲಿ ಯಾವುದೇ ವ್ಯಕ್ತಿ ಕೇಳಿದರೂ ಮೋದಿ ಗೊತ್ತು. ವಿಶ್ವದ ಯಾರನ್ನೇ ಕೇಳಿದರೂ ಈ ದೇಶದ ಪ್ರಧಾನಿ ಯಾರು ಅಂತಾ ಹೇಳ್ತಾರೆ. ನಿಮ್ಮ ನಾಯಕ ಯಾರು? ರಾಹುಲ್ ಗಾಂಧಿನಾ? ಲೀಡರ್ ಲೆಸ್ ಅಂತಾ ಹೇಳೋದು ಬಹಳ ಸುಲಭ. ರಾಜ್ಯದಲ್ಲಿ ಇಬ್ಬರೂ ಲೀಡರ್‍ಗಳು ಕುಸ್ತಿ ಆಡ್ತಿದ್ದಾರೆ. ಇದನ್ನ ಲೀಡರ್ ಪಕ್ಷ ಅಂತಾ ಕರೆಯುತ್ತೀರಾ? ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಪ್ರಶ್ನಿಸಿದ್ದಾರೆ.
ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೀವಿ. ನಮ್ಮ ನಾಯಕ ಮೋದಿ ಎಂದು ಯಾವ ಹಳ್ಳಿಯಲ್ಲಿ ರಾಹುಲ್ ಗಾಂಧಿ ಹೆಸರೇಳುತ್ತಾರೆ? ಪ್ರಿಯಾಂಕ್ ಖರ್ಗೆಗೆ ಮಾನಮರ್ಯಾದೆ ಇದ್ದಿದ್ದರೆ ಪ್ರಾರಂಭದಲ್ಲಿ ಸಿದ್ದರಾಮಯ್ಯ ಸಿಎಂ ಆಗಿರಲಿ ಅಂದವರು ಈಗ ನಾನೇ ಸಿಎಂ ಎನ್ನುವ ಮಟ್ಟಕ್ಕೆ ಬೆಳೆದಿದ್ದಾರೆ. ಸಿದ್ದರಾಮಯ್ಯ ಸಿಎಂ ಅಂತಿದ್ದ ಸಚಿವ ರಾಜಣ್ಣ ನಿನ್ನೆ ಇದ್ದಕ್ಕಿದ್ದಂತೆ ಪರಮೇಶ್ವರ್ ಸಿಎಂ ಆಗಲಿ ಅಂದಿದ್ದಾರೆ. ಇದು ಕಾಂಗ್ರೆಸ್‍ಗೆ ಬಂದಿರುವ ದುಸ್ಥಿತಿ ಎಂದರು.
ಕಾಂಗ್ರೆಸ್‍ನಲ್ಲಿ ಸಿಎಂ ಸ್ಥಾನದ ಜಟಾಪಟಿ ವಿಚಾರವಾಗಿ ಮಾತನಾಡಿದ ಅವರು, ಈ ಪ್ರಶ್ನೆಯನ್ನ ಸಿಎಂ ಸಿದ್ದರಾಮಯ್ಯನವರನ್ನೇ ಕೇಳಿ, ಯಾವುದೇ ಮುಖ್ಯಮಂತ್ರಿ 5 ವರ್ಷ ನಾನೇ ಮುಖ್ಯಮಂತ್ರಿ ಹೇಳುವ ದುಸ್ಥಿತಿ ಬಂದಿರಲಿಲ್ಲ. 135 ಸೀಟು ಇಟ್ಕೊಂಡು ಕಾಂಗ್ರೆಸ್‍ಗೆ ಈ ದುಸ್ಥಿತಿ ಬರಬಾರದಿತ್ತು. ಮೂರು ದಿನದ ಕೆಳಗೆ ಕಾಂಗ್ರೆಸ್ ನಾಯಕರಾದ ಸುರ್ಜೇವಾಲ, ವೇಣುಗೋಪಾಲ್ ಬೆಂಗಳೂರಿಗೆ ಬಂದಿದ್ದರು. ಎಲ್ಲಾ ಶಾಸಕರಿಗೂ ಯಾವುದೇ ರೀತಿಯ ಬಹಿರಂಗ ಹೇಳಿಕೆ ಕೊಡಬಾರದು ಅಂತಾ ಹೇಳಿದ್ದರು. ಆದರೆ, ಸ್ವತಃ ಮುಖ್ಯಮಂತ್ರಿಗಳೇ ಬಹಿರಂಗವಾಗಿ ಹೇಳಿಕೆ ಕೊಟ್ಟರು ಎಂದು ಹರಿಹಾಯ್ದರು.
ಬಿಜೆಪಿ ರಾಜ್ಯಾಧ್ಯಕ್ಷ ನೇಮಕ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಿಮಗೆ ಹೇಳೋರು ಕೇಳೋರು ಯಾರು ಇಲ್ಲ. ನೀವು ಎಲ್ಲಾ ಕಡೆ ಪ್ರಶ್ನೆ ಮಾಡ್ತೀರಿ ಯಾವುದೋ ಒಂದು ಹೆಸರು ತೇಲಿ ಬಿಟ್ಟುಬಿಡ್ತೀರಿ. ಅದೇ ವಿಚಾರ ದೊಡ್ಡ ಚರ್ಚೆ ಆಗುತ್ತೆ, ಜನ ಮಾತನಾಡುವ ಹಾಗೆ ನೀವೇ ಮಾಡ್ತೀರಾ ಶೋಭಾ ಕರಂದ್ಲಾಜೆ, ವಿಜಯೇಂದ್ರ ರಾಜ್ಯಾಧ್ಯಕ್ಷರಾಗ್ತಾರೆ ಅಂತ ಯಾರಾದರೂ ಕೇಂದ್ರ ನಾಯಕರು, ರಾಜ್ಯ ನಾಯಕರು ಹೇಳಿದ್ದಾರಾ ? ಸುಮ್ನೇ ಯಾವುದೋ ಹೆಸರು ತೇಲಿ ಬಿಟ್ಟು ಅದನ್ನೇ ದೊಡ್ಡ ಸುದ್ದಿ ಮಾಡ್ತೀರಾ ಅಷ್ಟೆ ಎಂದು ಗರಂ ಆದರು.
ಬಿಜೆಪಿಯವರು ರಾಜ್ಯದಲ್ಲಿ 1 ಕೋಟಿ . ಸದಸ್ಯರಿದ್ದೇವೆ, ಅವರಲ್ಲಿ ಯಾರೇ ಆದರೂ ಸಂಘಟನೆ ಮಾಡಿಕೊಂಡು ಹೋಗುತ್ತೇವೆ. ನಾವು ವ್ಯಕ್ತಿ ಮೇಲೆ ಪಕ್ಷ ಕಟ್ಟಿಲ್ಲ, ಸಂಘಟನೆ, ಹಿಂದುತ್ವ, ರಾಷ್ಟ್ರೀಯ ವಿಚಾರಗಳ ಮೇಲೆ ಪಕ್ಷ ಕಟ್ಟಿದ್ದೇವೆ. ಯಾರೇ ಅಧ್ಯಕ್ಷರಾದರೂ ನಾವೇ ಅಧ್ಯಕ್ಷರು ಎಂದುಕೊಂಡು ಕೆಲಸ ಮಾಡುತ್ತೇವೆ. ನಮಲ್ಲಿ ವ್ಯಕ್ತಿಗೆ ಗೌರವ ಕೊಡುವ ಪ್ರಶ್ನೆಯೇ ಇಲ್ಲ. ಈಗ ನಳೀನ್ ಕುಮಾರ್ ಕಟೀಲ್ ಇದ್ದಾರೆ. ಅವರ ನೇತೃತ್ವದಲ್ಲಿ ಎಲ್ಲಾ ಸುಸೂತ್ರವಾಗಿ ನಡೆಯುತ್ತಿದೆ. ಮುಂದೆ ಯಾರಾಗ್ತಾರೋ ಬಿಡ್ತಾರೋ ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ತಿಳಿಸಿದರು.