ಸಿದ್ದರಾಮಯ್ಯ ಒಬ್ಬ ಡೋಂಗಿ ರಾಜಕಾರಣಿ: ಎಂ.ಜಿ.ಮಹೇಶ್ ವಾಗ್ದಾಳಿ

ಮೈಸೂರು, ನ.29:- ಕಾಂಗ್ರೆಸ್ ಪಕ್ಷದ ಆಯುಸ್ಸು ಇನ್ನು ಕೆಲವೇ ವರ್ಷ ಮಾತ್ರ. ವಾಸ್ತವವಾಗಿ ಕಾಂಗ್ರೆಸ್ ಪಕ್ಷವನ್ನು ದೇಶವು ಸ್ವಾತಂತ್ರ್ಯ ಪಡೆದ ಕೂಡಲೇ ವಿಸರ್ಜಿಸಬೇಕಿತ್ತು. ಇದೇ ಆಶಯವನ್ನು ಮಹಾತ್ಮ ಗಾಂಧೀಜಿ ಅವರೂ ವ್ಯಕ್ತಪಡಿಸಿದ್ದರು. ಆದರೆ, ವಂಶವಾದ, ಜಾತಿವಾದ, ಕೋಮು ವಿಷಬೀಜ ಬಿತ್ತಿದ ಕಾಂಗ್ರೆಸ್ ನ ನೇತಾರರು (ನೆಹರೂ, ಇಂದಿರಾ ಗಾಂಧಿ ವಂಶಜರು) ಗಾಂಧೀಜಿ ಮಾತನ್ನು ಪುರಸ್ಕರಿಸಲೇ ಇಲ್ಲ, ಇದರಿಂದ ಕಾಂಗ್ರೆಸ್, ಸುಮಾರು ಆರು ದಶಕಗಳ ಕಾಲ ಭ್ರಷ್ಟಾಚಾರಗಳ ಕೂಪವಾಗಿ ದೇಶವನ್ನು ಪರಿವರ್ತಿಸಿತ್ತು ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ತಿಳಿಸಿದರು.
ಬಿಜೆಪಿ ಕಛೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿಯ ಕೇಂದ್ರ ಸರಕಾರವು ಮಾಡಿದ ಸಾಧನೆ ಅನನ್ಯ.
ಅವರ ನೇತೃತ್ವದಲ್ಲಿ ದೇಶವು ವಿಶ್ವವಂದ್ಯ ರಾಷ್ಟ್ರವಾಗುವತ್ತ ಮುನ್ನಡೆದಿದೆ. 44 ಕೋಟಿ ಜನ್ ಧನ್ ಖಾತೆಗಳು,10 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಾಣದ ಮೂಲಕ ಮಹಿಳೆಯರ ಘನತೆ ಹಚ್ಚಳ, ಕೃಷಿ ಉತ್ಪನ್ನಗಳ ದರ ಹೆಚ್ಚಳಕ್ಕೆ ಶ್ರಮ, ಮನೆ ಮನೆಗೂ ನಲ್ಲಿ ನೀರಿನ ಸಂಪರ್ಕಕ್ಕೆ ಪಣ, ಆರು ದಶಕಗಳ ನಂತರವೂ ಸಂಪರ್ಕ ಸಿಗದ 5 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, ಬಡವರ ಮನೆಗಳಿಗೆ ವಿದ್ಯುತ್, ಸಿಲಿಂಡರ್ ಸಂಪರ್ಕದ ಯೋಜನೆ ಇವೆಲ್ಲವೂ ಪ್ರಧಾನಿ ಮೋದಿಯವರ ಸಾಧನೆಯ ಬೆರಳಣಿಕೆಯ ಉದಾಹರಣೆಗಳಷ್ಟೇ.
ಕಾಂಗ್ರೆಸ್ ತನ್ನ ಅವಧಿಯಲ್ಲಿ ಭ್ರಷ್ಟತೆಯನ್ನೇ ದೊಡ್ಡ ಸಾಧನೆಯನ್ನಾಗಿ ಮಾಡಿಕೊಂಡಿತ್ತು ಎಂಬುದೂ ಉಲ್ಲೇಖಾರ್ಹ.
ಕೋವಿಡ್ ಸಾಂಕ್ರಾಮಿಕದ ನಡುವೆಯೂ ಭಾರತದ ಸಾಧನೆ ಅನನ್ಯ. ರಾಜ್ಯವೂ ಜನಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಉಲ್ಲೇಖಾರ್ಹ ಸಾಧನೆಗಳನ್ನು ಮಾಡಿದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿದವರು. ಅದಕ್ಕೆ ಮುಂಚೆ ಅವರು ಜೆಡಿಎಸ್‍ನಲ್ಲಿ ಇದ್ದರು. ಸಿದ್ದರಾಮಯ್ಯ ವಾಸ್ತವವಾಗಿ ಒಬ್ಬ ಡೋಂಗಿ ರಾಜಕಾರಣಿ. ಅವರು ಕಾಂಗ್ರೆಸ್ ಪಕ್ಷ ಹೊಟ್ಟೆ ಪಾಡಿಗಾಗಿ ಹೋದವರು, ಸಿದ್ದರಾಮಯ ಬದ್ಧತೆ ಇಲ್ಲದ ಒಬ್ಬ ಸಮಯ ಸಾಧಕ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಹಿಂದೆ ಜನತಾದಳದಲ್ಲಿದ್ದಾಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದರು. ಆಗ ತುರ್ತು ಪರಿಸ್ಥಿತಿ ಘೋಷಣೆಯನ್ನು ಸಿದ್ಧರಾಮಯ ಅವರು ಸಂಪೂರ್ಣವಾಗಿ ವಿರೋಧಿಸಿದ್ದರು. ಈಗ ಕಾಂಗ್ರೆಸ್ ಗೆ ವಲಸೆ ಹೋದ ಸಿದ್ದರಾಮಯ್ಯ ಅವರು ಇಂದಿರಾ ಗಾಂಧಿ ಅವರ ತುರ್ತು ಪರಿಸ್ಥಿತಿ ಘೋಷಣೆಯನ್ನು ಸಮರ್ಥಿಸುತ್ತಾರಾ ಎಂದು ಪ್ರಶ್ನಿಸಿದರು.
ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಾರೆ. ಆದರೆ, ಕಾಂಗ್ರೆಸ್ ಗೆ ಮತ್ತು ಕಾಂಗ್ರೆಸ್ ನಾಯಕರಿಗೆ ಸಂವಿಧಾನದ ಬಗ್ಗೆ ಹಾಗೂ ಸಂವಿಧಾನ ಕರ್ತ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಗೌರವ ಇಲ್ಲ, ಪ್ರಧಾನಿಗಳಾದ ನರೇಂದ್ರ ಮೋದಿಯವರ ಭಾಷಣದ ವೇಳೆ ಸಂವಿಧಾನ ದಿನವನ್ನು ಕಾಂಗ್ರೆಸ್ ಬಹಿಷ್ಕರಿಸಿದೆ. ಇದು ಈ ಪಕ್ಷದ ಗೋಸುಂಬೆನೀತಿಗೆ ಸ್ಪಷ್ಟ ಉದಾಹರಣೆ ಅಲ್ಲವೇ ಎಂದು ಪ್ರಶ್ನಿಸಿದರು.
ಸಂವಿಧಾನಕರ್ತೃ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರಿಗೆ ಗೌರವ ಕೊಡುವ ಪ್ರವೃತ್ತಿ ಕಾಂಗ್ರೆಸ್ ಪಕ್ಷದವರಿಗೆ ಇಲ್ಲ. ಬಾಬಾಸಾಹೇಬ್ ಅವರು ಲೋಕಸಭೆಗೆ ಸ್ಪರ್ಧಿಸಿದಾಗ ಅವರನ್ನು ಸೋಲಿಸಿದ ಕಾಂಗ್ರೆಸ್ ಪಕ್ಷದವರದ್ದು ಮುಖವಾಡದ ಕ್ಷಣಕ್ಕೊಂದು ಮತ್ತು ದಿನಕ್ಕೊಂದು ಯೋಚನೆ. ಆದರೆ ಪ್ರಧಾನಮಂತ್ರಿಯವರಾದ ನರೇಂದ್ರ ಮೋದಿಜಿ ಅವರು ಡಾ. ಅಂಬೇಡ್ಕರ್ ಅವರಿಗೆ ಗರಿಷ್ಠ ಗೌರವ ನೀಡಿದ್ದಾರೆ. ಅವರ ಜನ್ಮಸ್ಥಳ, ಸಮಾಧಿ ಸೇರಿದಂತೆ 5 ಮಹತ್ವದ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಗರಿಷ್ಠ ಗೌರವ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದವರು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಕೇವಲ ಮತಬ್ಯಾಂಕ್ ಆಗಿ ಪರಿವರ್ತಿಸಿದ್ದರು. ಆದರೆ, ಬಿಜೆಪಿಯು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಚಿಂತನೆಯನ್ನೇ ಅನುಷ್ಠಾನಕ್ಕೆ ತಂದಿದೆ. ಕೇಂದ್ರ ಸಚಿವ ಸಂಪುಟದಲ್ಲಿ ನರೇಂದ್ರ ಮೋದಿ ಅವರು ದಲಿತರು, ಹಿಂದುಳಿದವರಿಗೆ ಹೆಚ್ಚಿನ ಅವಕಾಶ ನೀಡಿದ್ದಾರೆ. ರಾಜ್ಯಪಾಲರ ನೇಮಕಾತಿಯಲ್ಲೂ ಅವರು ಇದೇ ಮಾದರಿಯನ್ನು ಅನುಸರಿಸಿದ್ದಾರೆ. ಕಾಂಗ್ರೆಸ್ ನದು ತೋರಿಕೆಯ ದಲಿತ ಪ್ರೇಮ. ಬಿಜೆಪಿಯ ದಲಿತರ ಪರ ಇರುವ ನೈಜ ಕಾಳಜಿ ಮತ್ತು ಕಾರ್ಯಕ್ರಮಗಳನ್ನು ಗಮನಿಸಿ ದಲಿತರು ಬಿಜೆಪಿಯನ್ನು ಸೇರುತ್ತಿದ್ದಾರೆ, ಬಿಜೆಪಿ ಸರ್ವಮಾನ್ನು ಪಕ್ಷವಾಗಿ ಹೊರಹೊಮ್ಮಿದ್ದು, ಜನರು ಚುನಾವಣೆಗಳಲ್ಲಿ ಅದರ ಸಾಧನೆಯನ್ನು ಹೆಚ್ಚಿಸುತ್ತಲೇ ಇದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಎಸ್.ಸಿ ಮೋರ್ಚಾ ಅಧ್ಯಕ್ಷ ಈಶ್ವರ, ಮಾಧ್ಯಮ ವಕ್ತಾರ ಪ್ರದೀಪ್ ಕುಮಾರ್, ಮಾಧ್ಯಮ ಸಹ ವಕ್ತಾರರಾದ ಕೇಬಲ್ ಮಹೇಶ್, ಮೈಸೂರು ಜಿಲ್ಲಾ ಗ್ರಾಮಾಂತರ ಎಸ್.ಸಿ ಮೋರ್ಚಾ ಅಧ್ಯಕ್ಷ ರಾದ ಸಿ.ಎಂ. ಮಹದೇವಯ್ಯ, ಎಸ್ ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಪರಮಾನಂದ, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬಾಬು ಉಪಸ್ಥಿತರಿದ್ದರು.