ಸಿದ್ದರಾಮಯ್ಯರನ್ನ ಹತ್ಯೆ ಮಾಡಿ ಹೇಳಿಕೆ ಆರೋಪ: ಅಶ್ವಥ್ ನಾರಾಯಣ್ ವಿರುದ್ಧ ಎಫ್‍ಐಆರ್

ಮೈಸೂರು: ಮೇ.25:- `ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕ್ಬೇಕು’ ಎಂಬ ಹೇಳಿಕೆ ನೀಡಿದ್ದ ಆರೋಪದ ಮೇಲೆ ಮಾಜಿ ಸಚಿವ ಅಶ್ವಥ್ ನಾರಾಯಣ್ ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಫೆಬ್ರವರಿ 15ರಂದು ಮಂಡ್ಯದ ಸಾತನೂರಿನಲ್ಲಿ ಸಿದ್ದರಾಮಯ್ಯ ಅವರ ಹತ್ಯೆಗೆ ಪ್ರಚೋದಿಸುವಂತೆ ಅಶ್ವಥ್ ನಾರಾಯಣ್ ಹೇಳಿಕೆ ನೀಡಿದ್ದರು. ಹೇಳಿಕೆ ಖಂಡಿಸಿ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೈಸೂರಿನ ದೇವರಾಜ ಪೆÇಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದೂರು ಸಲ್ಲಿಸಿ ಬಹಳ ದಿನಗಳಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬುಧವಾರ (ಮೇ 24) ಎಫ್‍ಐಆರ್ ದಾಖಲಿಸುವಂತೆ ಮತ್ತೊಮ್ಮೆ ದೂರು ಸಲ್ಲಿಸಿದರು.
ದೂರು ಸ್ವೀಕರಿಸಿದ ಪೆÇಲೀಸರು ಮಾಜಿ ಸಚಿವರ ವಿರುದ್ಧ ಕೊಲೆ ಬೆದರಿಕೆ, ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಅಶ್ವಥ್ ನಾರಾಯಣ್ ಹೇಳಿದ್ದೇನು?
ಫೆಬ್ರವರಿ 15ರಂದು ಮಂಡ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಅಶ್ವಥ್ ನಾರಾಯಣ್ ಮಂಡ್ಯ ಜನರಿಗೆ ರಾಜಕೀಯ ಬದಲಾವಣೆ ಮಾಡುವ ಶಕ್ತಿ ಇದೆ. ಮಂಡ್ಯದವರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧಿಸುತ್ತಾರೆ. ರಾಜಕೀಯ ದಿಕ್ಸೂಚಿ ಮಂಡ್ಯದಿಂದ ಕಾಣಬೇಕು. ಹೀಗೆ ಮಾಡಲಿಲ್ಲ ಅಂದ್ರೆ ಟಿಪ್ಪು ಸುಲ್ತಾನ್ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುತ್ತಾರೆ.
ನಿಮಗೆ ಟಿಪ್ಪು ಬೇಕಾ ಸಾವರ್ಕರ್ ಬೇಕಾ? ಟಿಪ್ಪು ಬೇಡಾ ಅಂದ್ರೆ ಸಿದ್ದರಾಮಯ್ಯ ಅವರನ್ನು ಟಿಪ್ಪು ಕಳುಹಿಸಿದ ಹಾಗೆ ಕಳಿಸಬೇಕು. ಹುರಿಗೌಡ, ನಂಜೇಗೌಡ ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನ ಹೊಡೆದು ಹಾಕಬೇಕು ಎಂದು ಹೇಳಿದ್ದರು.