ಸಿದ್ದರಾಮಯ್ಯರನ್ನ ಮೂಲೆಗುಂಪು ಮಾಡಿದರೆಕಾಂಗ್ರೆಸ್‌ಗೆ ಉಳಿಗಾಲವಿಲ್ಲ-ರಮೇಶ್‌ಕುಮಾರ್

ಶ್ರೀನಿವಾಸಪುರ.ಏ,೩-ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಿಂದ ಪಕ್ಕಕ್ಕೆ ಸರಿದರೆ ಕಾಂಗ್ರೆಸ್‌ಗೆ ಆಂಧ್ರದಲ್ಲಿ ಬಂದ ಪರಿಸ್ಥಿತಿ ಬರುತ್ತದೆ. ಕುರುಬ ಸಮಾಜದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಕ್ಕೆ ಕೆಲವರಿಗೆ ಹೊಟ್ಟೆಕಿಚ್ಚು. ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕಾದರೆ ನೀವು ನನ್ನನ್ನ ಗೆಲ್ಲಿಸಬೇಕೆಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಕುರುಬ ಸಮಾಜದ ಬೆಂಬಲ ಕೋರಿದರು.
ಪಟ್ಟಣದ ಕನಕ ಸಮುದಾಯ ಭವನದಲ್ಲಿ ಕಾಂಗ್ರೆಸ್‌ಗೆ ಕುರುಬರ ಬೆಂಬಲ ಕೋರಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೂರ್ಯಚಂದ್ರರು ಪೂರ್ವದಲ್ಲಿ ಉದಯವಾಗುವುದು ಎಷ್ಟು ಸತ್ಯವೋ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವುದು ಅಷ್ಟೇ ಸತ್ಯ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ೨ನೇ ಬಾರಿಗೆ ಮುಖ್ಯ ಮಂತ್ರಿ ಆಗಬೇಕಾದರೆ ಕುರುಬರೆಲ್ಲಾ ಒಬ್ಬರಿಗೊಬ್ಬರು ಹೇಳಿಕೊಂಡು ಸಂಘಟನೆಯಾಗಿ ಕಾಂಗ್ರೆಸ್‌ಗೆ ಮತಹಾಕಿಸಿ ನನ್ನ ಗೆಲುವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕುರುಬ ಸಮಾಜದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಕ್ಕೆ ಕೆಲವರು ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ಮತ್ತೊಮ್ಮೆ ಅವರು ಸಿಎಂ ಆಗಬೇಕಾದರೆ ನಿಮ್ಮಲ್ಲಿ ನೀವು ವಿಭಾಗವಾಗದೆ ನನ್ನ ಮೇಲೆ ಅಭಿಮಾನ ಇದ್ದರೆ ನನಗೆ ಎಲ್ಲರೂ ಸಂಘಟನೆಯಾಗಿ ಮತ ಹಾಕಿ ಗೆಲ್ಲಿಸಿ, ಅವರು ಸಿಎಂ ಆಗಲು ನೀವೆಲ್ಲಾ ದೊಡ್ಡ ಮನಸ್ಸು ಮಾಡಿ ಎಂದು ಕಿವಿಮಾತು ಹೇಳಿದರು.
ರಾಹುಲ್‌ಗಾಂಧಿ ಸಮಾನವಾಗಿ ಮಾತನಾಡುವ ವ್ಯಕ್ತಿ ಇದ್ದಾರೆಂದರೆ ಅದು ಸಿದ್ದರಾಮಯ್ಯ ಮಾತ್ರ, ಅವರು ಕೋಲಾರದಲ್ಲಿ ಸ್ಪರ್ಧಿಸುವುದು ಸತ್ಯ. ಕೆಲವರು ಈ ಹಿಂದೆ ಚಾಮುಂಡೇಶ್ವರಿಗೆ ಸಿದ್ದರಾಮಯ್ಯ ಬೆನ್ನಮೇಲೆ ಕೈ ಹಾಕಿಕೊಂಡು ಕರೆದುಕೊಂಡು ಹೋಗಿ ಸೋಲಿಸುವ ಮೂಲಕ ಬೆನ್ನಿಗೆ ಚೂರಿ ಹಾಕಿದ್ದಾರೆ. ಆದರೆ ಕೋಲಾರದಲ್ಲಿ ಸ್ಪರ್ಧಿಸಿದರೆ ಅವರಿಗೆ ಪರಿಶಿಷ್ಟರು, ಕುರುಬರು, ಅಲ್ಪಸಂಖ್ಯಾತರು ಎಲ್ಲಾ ಹಿಂದುಳಿದ ಸಮಾಜದವರು ಮತ ಹಾಕಿ ಗೆಲ್ಲಿಸುತ್ತಾರೆ. ಈಗಾಗಲೇ ಕೆಲವರಿಗೆ ಮತ್ತೆ ಕುರುಬನು ಸಿಎಂ ಆಗುತ್ತಾರೆಂದು ಹೊಟ್ಟೆ ಕಿಚ್ಚು ಪ್ರಾರಂಭವಾಗಿದೆ ಎಂದು ಯಾರ ಹೆಸರು ಹೇಳದೆ ಕಿಡಿಕಾರಿದರು.
ಜಾತಿಗಳು ದೇವರು ಸೃಷ್ಟಿಸಿಲ್ಲ, ಅದು ಸಮಾಜದಲ್ಲಿ ನಾವು ಸೃಷ್ಟಿಸಿಕೊಂಡಿರುವುದು, ಈ ಹಿಂದಿನ ಅವಧಿಯಲ್ಲಿ ಜಾತಿ ಮತ ಬೇದ ಇಲ್ಲದೆ ಹಸಿದವರಿಗೆ ಹೊಟ್ಟೆ ತುಂಬ ಅನ್ನ, ವೃದ್ದರಿಗೆ ವೃದ್ದಪ್ಯ ವೇತನ, ಬಡವರ ಆರೋಗ್ಯ ವೃದ್ಧಿಗೆ ಆದ್ಯತೆ ಕೊಟ್ಟ ದೊಡ್ಡ ಮನುಷ್ಯ ಸಿದ್ದರಾಮಯ್ಯ ಎಂದು ಸಿದ್ದರಾಮಯ್ಯರನ್ನು ಕೊಂಡಾಡಿದರು.
ಕುರುಬ ಸಮಾಜದ ಮುಖಂಡ ಸೋಮಶೇಖರ್ ಮಾತನಾಡಿ, ಕೋಲಾರದಲ್ಲಿ ಸಿದ್ರಾಮಣ್ಣ ಗೆಲ್ಲುಬೇಕು, ಶ್ರೀನಿವಾಸಪುರದಲ್ಲಿ ರಮೇಶ್‌ಕುಮಾರ್ ಗೆಲ್ಲಬೇಕು, ಸ್ವಾಭಿಮಾನ ಹೊಂದಿರುವ ಕುರುಬ ಸಮಾಜದವರು ಎಲ್ಲಾ ಪಕ್ಷಗಳಲ್ಲಿರುವವರನ್ನ ಕರೆತಂದು ಗೆಲ್ಲಿಸಬೇಕು ಎಂದು ತಿಳಿಸಿದರು.

ಉಳಿಗಾಲವಿಲ್ಲ
ವಿಪಕ್ಷ ನಾಯಕ ಸಿದ್ದರಾಮಯ್ಯರನ್ನ ಕಾಂಗ್ರೆಸ್ ಪಕ್ಷದಲ್ಲಿ ಮೂಲೆ ಗುಂಪು ಮಾಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಇರೋದಿಲ್ಲ ಎಂದು ಸಿದ್ದರಾಮಯ್ಯ ಆಪ್ತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತೊಂದು ವಿವಾದಿತ ಹೇಳಿಕೆಗೆ ಸಾಕ್ಷಿಯಾಗಿದ್ದಾರೆ.
ಶ್ರೀನಿವಾಸಪುರದಲ್ಲಿ ಕುರುಬರ ಸಂಘದ ಸಭೆಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತು ಸಧ್ಯ ರಾಜ್ಯ ರಾಜಕಾರಣದಲ್ಲಿ ದೊಡ್ಡ ರಾಜಕೀಯ ಸ್ಪೋಟಕ್ಕೆ ಕಾರಣವಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ರಮೇಶ್ ಕುಮಾರ್ ಈ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿಯೇ ಬೆಂಕಿ ಹೊತ್ತಿಕೊಳ್ಳುವ ಎಲ್ಲಾ ಸಾಧ್ಯತೆಗಳು ಇವೆ.