ಸಿದ್ದರಾಮಯ್ಯರನ್ನು ಪೂರ್ಣ ಪ್ರಮಾಣದ ಅವಧಿಗೆ ಸಿಎಂ ಮಾಡಲು ಮನವಿ

ದಾವಣಗೆರೆ.ಮೇ.೧೮: ಶೋಷಿತ ವರ್ಗಗಳ ನಾಯಕ ಸಿದ್ದರಾಮಯ್ಯ ಅವರಿಗೆ ಪೂರ್ಣ ಪ್ರಮಾಣದಲ್ಲಿ ಮುಖ್ಯಮಂತ್ರಿಯನ್ನಾಗಿ ಅವಕಾಶ ನೀಡಬೇಕು ಹಾಗೂ ಕುರುಬ ಸಮುದಾಯಕ್ಕೆ 3 ಸಚಿವ ಸ್ಥಾನ, ದಾವಣಗೆರೆ ಜಿಲ್ಲೆಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡುವಂತೆ ದಾವಣಗೆರೆ ಜಿಲ್ಲಾ ಹಾಲುಮತ ಮಹಾಸಭಾ ಒತ್ತಾಯಿಸಿದೆ.ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ವೀರಣ್ಣ, ಕರ್ನಾಟಕ ರಾಜ್ಯದಲ್ಲಿ 10 ವರ್ಷಗಳ ನಂತರ ಕಾಂಗ್ರೇಸ್ ಪಕ್ಷ 136 ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. 2013 ರಿಂದ 2018ರವರೆವಿಗೂ 5 ವರ್ಷಗಳ ಕಾಲ ಉತ್ತಮವಾದ ಸುಭದ್ರ ಆಡಳಿತ ನೀಡಿ, ಸಮರ್ಥ ನಾಯಕತ್ವದೊಂದಿಗೆ, ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಎಲ್ಲಾ ಸಮುದಾಯಗಳಿಗೂ ಅವಕಾಶ ನೀಡಿದ್ದರು ಎಂದು ಮಾಹಿತಿ ನೀಡಿದರು.ಅಲ್ಲದೇ ಐದು ವರ್ಷಗಳ ಕಾಲ ಕಳಂಕ ರಹಿತರಾಗಿ ಕಾರ್ಯ ನಿರ್ವಹಿಸಿದ್ದರು. ಅತಿ ಹೆಚ್ಚು ಬಾರಿ ಹಣಕಾಸು ಸಚಿವರಾಗಿ, ಆಯವ್ಯಯವನ್ನು ಮಂಡಿಸಿದ ಕೀರ್ತಿಗೂ ಪಾತ್ರರಾಗಿದ್ದಾರೆ. ಅಲ್ಲದೇ 2018ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಅವಕಾಶಗಳಿದ್ದರೂ ಸಹ ಪಿತೂರಿಯಿಂದಾಗಿ ಅಧಿಕಾರ ವಂಚಿತರಾದರು ಎಂದು ಹೇಳಿದರು.ರಾಜ್ಯದ ಬೀದರ್ ಜಿಲ್ಲೆಯ ಔರಾದ್‌ ನಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ವರೆಗೂ ಜನರ ವಿಶ್ವಾಸವನ್ನು ಗಳಿಸಿ, ಜತೆಗೆ ಶೋಷಿತ ಸಮುದಾಯಗಳ ಉನ್ನತಿಯನ್ನೇ ಬಯಸುವ ಸಿದ್ದರಾಮಯ್ಯ ಮತ್ತೆ  ಮುಖ್ಯಮಂತ್ರಿ ಆಗಿದ್ದಾರೆ. 2018ರಲ್ಲಿ ಆದ ತಪ್ಪು ಮತ್ತೊಮ್ಮೆ ಆಗಬಾರದೆಂದು ಮುಖ್ಯವಾಗಿ ಶೇಕಡಾ 90ರಷ್ಟು ಮತದಾರರು ಕಾಂಗ್ರೇಸ್‌ ಪಕ್ಷಕ್ಕೆ ಮತ ನೀಡಿದ್ದಾರೆ. ಮಾತ್ರವಲ್ಲ ಸ್ವಾತಂತ್ರ್ಯದ ನಂತರ 76ವರ್ಷಗಳಲ್ಲಿ ಅಹಿಂದ ವರ್ಗಗಳಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿರುವುದು ಕೆಲವು ಬಾರಿ ಮಾತ್ರ ಆಯ್ಕೆಯಾಗಿರುವ ಶಾಸಕರ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ.ಶೋಷಿತ ವರ್ಗಗಳ ಧ್ವನಿಯಾಗುವ ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸುದ್ದಿ ಸಂತೋಷವನ್ನುಂಟು ಮಾಡಿದೆ. ಮುಂದಿನ 5 ವರ್ಷಗಳ ಪೂರ್ಣಾವಧಿಯನ್ನು ಪೂರೈಸಲು ಹೈಕಮಾಂಡ್ ಮತ್ತು ಕೆಪಿಸಿಸಿ ಶಾಸಕರು ಸಂಪೂರ್ಣ ಸಹಕಾರ ನೀಡಿ ಉತ್ತಮ ಆಡಳಿತವನ್ನು ನೀಡಲು ಸಹಕರಿಸಬೇಕು. ಕುರುಬ ಸಮುದಾಯಕ್ಕೆ ಮೂವರಿಗೆ ಸಚಿವ ಸ್ಥಾನವನ್ನು ನೀಡುವ ಜತೆ ದಾವಣಗೆರೆ ಜಿಲ್ಲೆಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಹಾಲುಮತ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಎಸ್.ಎಂ.ಸಿದ್ದಲಿಂಗಪ್ಪ, ಕಾರ್ಯಾಧ್ಯಕ್ಷ ದೀಟೂರು ಚಂದ್ರು, ಜಿ.ಷಣ್ಮುಖಪ್ಪ, ಸುರೇಶ್  ಇದ್ದರು.