ಸಿದ್ದರಾಮಯ್ಯನವರೇ 5ವರ್ಷಗಳವರೆಗೆ ಮುಖ್ಯಮಂತ್ರಿ-ಸಿ.ಎಂ.ಇಬ್ರಾಹಿಂ ”


ಸಂಜೆವಾಣಿ ವಾರ್ತೆ
ಸಿರಿಗೇರಿ ಆ.14. ಈ ಅವಧಿಯ ವಿಧಾನ ಸಭೆ ಚುನಾವಣೆಯಲ್ಲಿ ನಡೆದ ಪಕ್ಷಾಂತರದಿಂದ ರಾಜಕೀಯದ ದೃವೀಕರಣ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‍ರವರು ತಿಳಿಸಿದರೆ, ಮುಂದಿನ 4ವರ್ಷ 7ತಿಂಗಳು ಪೂರೈಸಿ 5ವರ್ಷಗಳವರೆಗೆ ಸಿದ್ದರಾಮಯ್ಯರವರೇ ಕರ್ನಾಟಕದ ಮುಖ್ಯಮಂತ್ರಿ ಎಂದು ರಾಜ್ಯ ಜನತಾದಳ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು. ನಿನ್ನೆ ಆ.13ರಂದು ಸಿರಿಗೇರಿಯ ಶ್ರೀನಾಗನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜಕೀಯ ಅಕಾಡೆಮಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮೊದಲಿಗೆ ಮಾಜಿ ಮುಖ್ಯಮಂತ್ರಿ ಕಾಂಗ್ರೇಸ್ ಪಕ್ಷದ ಜಗದೀಶ್‍ಶೆಟ್ಟರ್ ತಮ್ಮ ಮಾತು ಪ್ರಾರಂಭಿಸಿ ಜನಸಂಘದಿಂದ ಬೇರುಮಟ್ಟದಲ್ಲಿ ಪಕ್ಷ ಕಟ್ಟಿದ ನಮಗೆ ಏಕಾಎಕಿ ಟಿಕೆಟ್ ಇಲ್ಲ ಎಂದು ಮುಖದ ಮೇಲೆ ಹೊಡೆದಂತೆ ಹೇಳಿದ್ದು ನೋವು ತಂದಿತು. ಸ್ವಹಿತಾಸಕ್ತಿ ಹೊಂದಿದ್ದ ವ್ಯಕ್ತಿಗಳ ಗುಲಾಮಗಿರಿಯಲ್ಲಿ ಇರಲು ಮನಸ್ಸಿಲ್ಲದೇ ರಾಜ್ಯಕ್ಕೇ ಪರಿಚಯವಿದ್ದ ನಾನು ನನ್ನ ಸ್ವಾಭಿಮಾನಕ್ಕೆ ಬೆಲೆಕೊಟ್ಟು ಬಿಜೆಪಿಯಿಂದ ಹೊರಬಂದೆ ಎಂದು ತಿಳಿಸಿ, ಎಲ್ಲಾ ರಂಗಕ್ಕೂ ಪೂರ್ವಭಾವಿ ತರಬೇತಿ ಇದೆ, ರಾಜಕೀಯಕ್ಕೂ ತರಬೇತಿ ಅವಶ್ಯವಿದೆ ಇದು ಈ ಅಕಾಡೆಮಿಯಿಂದ ಆಗಲಿ ಎಂದು ತಿಳಿಸಿದರು.
    ನಂತರ ಜನತಾದಳ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಇವರು ಮಾತನಾಡಿ ಕಾಂಗ್ರೇಸ್‍ನಲ್ಲಿ ಯೋಜನೆಗಳನ್ನು ಮಾಡುವಾಗ ಮುಂದಾಲೋಚನೆ ಮಾಡಿಲ್ಲ. ಈಗ ಮರ್ಯಾದೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಮೇಲ್ವರ್ಗದಲ್ಲಿನ ಬಡವರಿಗೂ ಒಳ್ಳೆಯದಾಗುವ ನಿಟ್ಟಿನಲ್ಲಿ ಯೋಜನೆಗಳು ಇರಬೇಕು. ಈಗಿನ ರಾಜಕೀಯದಲ್ಲಿ ಸಜ್ಜನರಿಗೆ ಕಾಲ ಇಲ್ಲ. ರಾಜ್ಯದಲ್ಲಿ ಹಿಂದುಗಳು ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತಿದ್ದಾರೆ. ಆದರೆ ಈ ಬಾಂಧವ್ಯ ಹಾಳು ಮಾಡುವ ಕೆಲಸ ನಡೆಯುತ್ತಿದೆ. ಮಸೀದಿ ಮಂದಿರಗಳಲ್ಲಿ ದೇವರನ್ನು ನೋಡಲು ಎಲ್ಲರಿಗೂ ಅವಕಾಶವಿದೆ. ಯಾವ ಜಾತಿಗಳೂ ಶ್ರೇಷ್ಠವಲ್ಲ ಒಳ್ಳೆಯವರು ಮತ್ತು ಕೆಟ್ಟವರು ಎಂಬುವ ಎರಡೇ ಜಾತಿಗಳು ಇರುವುದು. ಚುನಾವಣೆಗಳು ಪಾರದರ್ಶಕವಾಗಿದ್ದರೆ ಒಳ್ಳೆಯ ರಾಜಕಾರಣಿಗಳು ಬರುತ್ತಾರೆಂದು ತಿಳಿಸಿದರು. ಶ್ರೀನಾಗನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ.ಮಹಾರುದ್ರಗೌಡ ಮಾತನಾಡಿದರು. ಸಿರಿಗೇರಿಎರಿಸ್ವಾಮಿ ನಿರ್ವಹಿಸಿದರು. ಗ್ರಾ.ಪಂ.ಉಪಾಧ್ಯಕ್ಷ ಎಚ್.ಎರೆಪ್ಪ, ಗ್ರಾಮದ ಮುಖಂಡರು ಸಾರ್ವಜನಿಕರು ಇದ್ದರು. ಕೊನೆಯಲ್ಲಿ ಉಭಯ ನಾಯಕರಿಗೆ ಮುಸ್ಲಿಂ ಕಮಿಟಿ ಮತ್ತು ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು. 

One attachment • Scanned by Gmail