
ಕೋಲಾರ,ಮೇ.೧೭:ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿದ್ದು, ಕಾಂಗ್ರೇಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿದೆ. ಈ ನಡುವೆ ಕಾಂಗ್ರೆಸ್ ಪಕ್ಷದಿಂದ ಯಾರು ಸಿಎಂ ಆಗಬೇಕು ಅನ್ನೋ ಜಟಾಪಟಿ ನಡೆಯುತ್ತಿರುವಾಗಲೇ ಸಿಎಂ ರೇಸ್‌ನಲ್ಲಿರುವ ಸಿದ್ದರಾಮಯ್ಯ ಅವರಿಗೆ, ಶ್ರೀನಿವಾಸಪುರ ಮೂಲದ ಅವರ ಅಭಿಮಾನಿಯೊಬ್ಬ ಅರ್ಥಪೂರ್ಣ ಹಾಡೊಂದು ರಚಿಸಿ ಹಾಡಿ ಸಿದ್ದುಗೆ ಹಾಡನ್ನು ಉಡುಗೋರೆಯಾಗಿ ನೀಡಿದ್ದಾರೆ.
ಸಿದ್ದರಾಮಯ್ಯ ಕುರಿತು ಅರ್ಥಪೂರ್ಣ ಹಾಡಿಗೆ ಸಾಹಿತ್ಯ ರಚನೆ ಮಾಡಿ, ಜಾನಪದ ಶೈಲಿಯ ಹಾಡೊಂದನ್ನು ಹಾಡುವ ಮೂಲಕ ಸಿದ್ದರಾಮಯ್ಯ ಅಭಿಮಾನಿಯೊಬ್ಬ ಗಮನ ಸೆಳೆದಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಯಡಗಾನಪಲ್ಲಿ ಗ್ರಾಮದ ಪ್ರಖ್ಯಾತ ಹಾಡುಗಾರ ಅಕ್ಬರ್ ಸಿದ್ದು ಅವರ ಮೇಲೆ ಹಾಡೊಂದನ್ನು ರಚಿಸಿ ಹಾಡಿದ್ದಾರೆ. ಅಕ್ಬರ್ ಮೂಲತ: ಒಳ್ಳೆಯ ಹಾಡುಗಾರ, ರಾಜ್ಯದ ಹಲವು ಭಾಗಗಳಲ್ಲಿ ವಿವಿಧ ಸಂಗೀತ ಕಾರ್ಯಕ್ರಮಗಳ ಮೂಲಕ ಪ್ರಖ್ಯಾತಿ ಪಡೆದಿದ್ದಾರೆ.
ಅದರಲ್ಲೂ ಹೆಚ್ಚಾಗಿ ಪೊಲೀಸ್ ಇಲಾಖೆಯ ಕಾರ್ಯಕ್ರಮಗಳಲ್ಲಿ ಅಕ್ಬರ್ ಅವರ ಹಾಡುಗಾರಿಕೆ ಇದ್ದೇ ಇರುತ್ತದೆ. ಅದೆಲ್ಲದಕ್ಕೂ ಮುಖ್ಯವಾಗಿ ಸಂಗೀತ ಲೋಕದ ದೈತ್ಯ ಹಾಡುಗಾರ ಪ್ರಪಂಚದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ಎಸ್.ಪಿ.ಬಾಲಸುಬ್ರಮಣ್ಯಂ ಅವರ ಶಿಷ್ಯ ಅನ್ನೋದು ವಿಶೇಷ, ಅವರೊಟ್ಟಿಗೆ ಅಕ್ಬರ್ ಶಂಕರಾಭರಣಂ ಹಾಡು ಹಾಡಿದ್ದರು ಅನ್ನೋ ಕೋಲಾರ ಇಲ್ಲೆಯ ಮಟ್ಟಿಗೆ ಹೆಮ್ಮೆಯ ವಿಚಾರ. ಹೀಗೆ ಹಲವು ವಿಚಾರಗಳಲ್ಲಿ ತಮ್ಮದೇ ಆದ ಹೆಸರು ಮಾಡಿದ್ದ ಅಕ್ಬರ್ ಅವರು ಸಿದ್ದರಾಮಯ್ಯ ಅವರ ವಿಶೇಷ ಅಭಿಮಾನಿ. ಹಾಗಾಗಿ ಅಕ್ಬರ್ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ ಅನ್ನೋ ಜಾನಪದ ಶೈಲಿಯ ಹಾಡಿಗೆ, ಸಿದ್ದರಾಮಯ್ಯ ಅವರ ಕುರಿತು ಸಾಹಿತ್ಯದ ಸಾಲುಗಳನ್ನು ಜೋಡಿಸಿ ಅದ್ಬುತವಾಗಿ ಅರ್ಥಪೂರ್ಣವಾಗಿ ಹಾಡಿದ್ದಾರೆ. ಅಕ್ಬರ್ ಅವರ ಹಾಡು ಎಲ್ಲೆಡೆ ಗಮನ ಸೆಳೆದಿದೆ.