’ಸಿದ್ದರಾಮಯ್ಯಗೆ ಗೋಶಾಪ ತಟ್ಟಿದ ಫಲವೇ ಸಿಎಂ ಹುದ್ದೆಯಿಂದ ಕೆಳಗಿಳಿದಿದ್ದಾರೆ’

ಬಂಟ್ವಾಳ, ಜ.೧೨- ಪಾಕ್ ಪರ ಘೋಷಣೆ ಕೂಗುವ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಬ್ರಹ್ಮರಕೂಟ್ಲುವಿನಲ್ಲಿರುವ ಬಂಟವಾಳ ಬಂಟರ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜನಸೇವಕ ಸಮಾವೇಶವನ್ನು ಗೋಪೂಜೆ ನೆರವೇರಿಸಿ, ಬಳಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಸಿದ್ದರಾಮಯ್ಯ ಅವರನ್ನು ತನ್ನ ಭಾಷಣದುದ್ದಕ್ಕೂ ಟೀಕಿಸಿದ ಈಶ್ವರಪ್ಪ, ಸಿದ್ದರಾಮಯ್ಯ ಅವರಿಗೆ ನಿದ್ದೆಯಲ್ಲೂ ನಳಿನ್ ಕಾಣಿಸುತ್ತಾರೆ ಎಂದರು. ಗೋಮಾತೆಯನ್ನು ಹಂಗಿಸಿದ ಪಾರ್ಟಿಗಳು ನೆಲಕಚ್ಚಿವೆ, ಅವರಿಗೆ ಗೋಶಾಪ ತಟ್ಟಿದ ಫಲವೇ ಸಿಎಂ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದು ಟೀಕಿಸಿದರು. ಎಲ್ಲ ಗ್ರಾಪಂ ಕಟ್ಟಡಗಳಿಗೆ ಸೋಲಾರ್ ದೀಪ, ಅಂಗನವಾಡಿ ಕಟ್ಟಡಗಳ ರಿಪೇರಿ ಮಾಡಲು ಅನುದಾನ ದೊರಕುವುದು ಎಂದ ಈಶ್ವರಪ್ಪ, ಗ್ರಾಪಂ ಸದಸ್ಯರು ತಮಗೆ ನೀಡುವ ತರಬೇತಿಗೆ ತಪ್ಪದೆ ತೆರಳಿ, ಜನಕಲ್ಯಾಣಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಜನವರಿ ೧೫, ೧೬, ೧೭ರಂದು ನಡೆಯುವ ರಾಮ ಮಂದಿರ ಅಭಿಯಾನಕ್ಕೆ ಕಾರ್ಯಕರ್ತರು ಸಹಕರಿಸಬೇಕು ಎಂದು ಕರೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪಂಚಾಯತ್ ಸದಸ್ಯರು ಕ್ರಿಯಾಶೀಲತೆಯೊಂದಿಗೆ ಹಳ್ಳಿ ಸರಕಾರದಂತೆ ಕಾರ್ಯನಿರ್ವಹಿಸಬೇಕು. ಇದಕ್ಕೆ ಪೂರಕವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಗ್ರಾಮ ಮಟ್ಟದಲ್ಲಿಯೇ ವಿತರಿಸಲು ಸರಕಾರ ಕ್ರಮಕೈಗೊಳ್ಳಲಿದೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರಿಗೆ ನಡೆಯಲಿರುವ ತರಬೇತಿಯನ್ನು ಎಲ್ಲಾ ಸದಸ್ಯರು ಪಡೆದು ಸದಸ್ಯರ ಕಾರ್ಯನೀತಿಯ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದರು. ರಾಜ್ಯಸಭಾ ಸದಸ್ಯರಾದ ಈಡಣ್ಣ ಕಡಾಡಿ, ರವಿಕುಮಾರ್, ಶಾಸಕರಾದ ಎಸ್.ಅಂಗಾರ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಡಾ. ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಸಂಜೀವ ಮಠಂದೂರು, ವಿಧಾನಪರಿಷತ್ತು ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಎಂಎಸ್ ಐಎಲ್ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಪ್ರಮುಖರಾದ ನಿತಿನ್ ಕುಮಾರ್, ಸುದೇಶ್ ಶೆಟ್ಟಿ, ರಾಮದಾಸ ಬಂಟ್ವಾಳ, ಕಸ್ತೂರಿ ಪಂಜ, ಉದಯಕುಮಾರ ಶೆಟ್ಟಿ, ಭಾರತೀಶ್ ,ರಾಜೇಶ್ ಕಾವೇರಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ವಹಿಸಿದ್ದರು. ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಸ್ವಾಗತಿಸಿದರು. ಪುತ್ತೂರು ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ ವಂದಿಸಿದರು. ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ವಂದೇ ಮಾತರಂ ಹಾಡಿದರು.