
ಮೈಸೂರು: ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಕುರಿತು ಖಾರವಾಗಿ ಪ್ರತಿಕ್ರಯಿಸಿದ ಶಾಸಕ ಹಾಗೂ ಮೈಸೂರು ವಿಭಾಗೀಯ ಚುನಾವಣಾ ಉಸ್ತುವಾರಿ ಕೆ.ಎಸ್.ಈಶ್ವರಪ್ಪ ಆ ಗ್ರಾಮ ಪಾಕಿಸ್ತಾನದಲ್ಲಿದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ರೋಡ್ ಶೋ ನಲ್ಲಿ ಭಾಗವಹಿಸಲು ನಗರಕ್ಕೆ ಭಾನುವಾರ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರಕ್ಕೆ ಅಡ್ಡಿಪಡಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಯಿಸಿದರು ಗೂಂಡಾಗಿರಿಯನ್ನು ಕಾಂಗ್ರೆಸ್ ಮಾಡುತ್ತದೆ. ಧರ್ಮ ವಿರೋಧಿಗಳಿರುವ ತಮಿಳುನಾಡಿನಲ್ಲೇ ಪ್ರಧಾನಿ ನರೇಂದ್ರಮೋದಿ 4 ಸ್ಥಾನ ಗೆಲ್ಲಿಸಿದರು. ರಾಜ್ಯದಲ್ಲೂ ಬಹುಮತ ಸಿಗಲಿದೆ. ವರುಣ ಕ್ಷೇತ್ರವನ್ನು ಸಿದ್ದರಾಮಯ್ಯ ಬಿಟ್ಟು ಬರುತ್ತಿಲ್ಲ. ಚಾಮುಂಡೇಶ್ವರಿ, ವರುಣ ಅವರ ಸ್ವಂತ ಆಸ್ತಿ ಆಗಿತ್ತು. ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸೋತರು. ಈ ಬಾರಿ ವರುಣದಲ್ಲಿ ಸೋಲಲಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ 1 ಸ್ಥಾನವೂ ಬಿಜೆಪಿ ಗೆಲ್ಲಲ್ಲ ಎಂದಿದ್ದರೂ ಆದರೆ, ಕಾಂಗ್ರೆಸ್ ಮಾತ್ರ ಒಂದೇ ಸ್ಥಾನಕ್ಕೆ ಸೀಮಿತವಾಯಿತೆಂದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜಾತಿವಾದಿಗಳಾಗಿದ್ದಾರೆ. ಜಾತಿ ಹೆಸರಿನಲ್ಲೇ ಮತ ಕೇಳುತ್ತಾರೆ. ರಾಷ್ಟ್ರೀಯವಾದವೇ ಈಶ್ವರಪ್ಪಗೆ ಉಸಿರು. ಹಿಂದುತ್ವ?ರಾಷ್ಟ್ರೀಯವಾದ ವಿರುದ್ಧ ಮಾತನಾಡಿದರೆ ನನ್ನ ಬಾಯಿ ಬಿಗಿ ಮಾಡಲು ಯಾರಿಂದಲೂ ಆಗದು.
ನರೇಂದ್ರ ಮೋದಿ, ಅಮಿತ್ ಶಾ ಜೋಡೆತ್ತಿನಂತೆ ರಾಜ್ಯದಾದ್ಯಂತ ದೂಳೆಬ್ಬಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳಿಂದ ಮೋದಿ ಪ್ರಖ್ಯಾತಿಗಳಿಸಿದ್ದು, ಅವರ ದರ್ಶನಕ್ಕಾಗಿ ಹಾಗೂ ಮಾತುಗಳನ್ನು ಕೇಳುವುದಕ್ಕಾಗಿ ಜನರು ಕಾದಿದ್ದಾರೆ’ ಎಂದು ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಮೋದಿ ಹೋಗಿರುವೆಡೆ ಬಿಜೆಪಿ ಅಮೋಘ ಜಯ ದಾಖಲಿಸಿದ್ದಾರೆ. ರಾಹುಲ್ ಗಾಂಧಿ ಪ್ರಚಾರ ನಡೆಸಿದ ಸ್ಥಳಗಳಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ. ಜನಸಾಮಾನ್ಯರ ಹೃದಯದಲ್ಲಿ ನರೇಂದ್ರ ಮೋದಿ ನೆಲೆಸಿದ್ದಾರೆ. ಬಿಜೆಪಿಯ ವರಿಷ್ಠರು ನಮಗಿಂತ ಬುದ್ಧಿವಂತರು. ಅವರ ತೀರ್ಮಾನಗಳನ್ನು ಶಿಸ್ತಿನ ಸಿಪಾಯಿಗಳಂತೆ ಪಾಲಿಸುವುದು ನಮ್ಮ ಕರ್ತವ್ಯ. ಶಿಸ್ತು ಪಾಲಿಸದವರು ಅನುಭವಿಸಲಿದ್ದಾರೆ ಎಂದರು.