ಸಿದ್ದರಾಜುನಾಯಕರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಸಕಲ ಗೌರವಗಳೊಂದಿಗೆ ನೆರವೇರಿತು

ಹನೂರು: ಮೇ.26: ಕಾಡುಗಳ್ಳ, ನರಹಂತಕ ವೀರಪ್ಪನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಗುಂಡಿನ ದಾಳಿಗೆ ತುತ್ತಾದರೂ ಬದುಕುಳಿದು ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದ ಹನೂರು ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದ ಸಿದ್ದರಾಜುನಾಯಕ ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಸಕಲ ಗೌರವಗಳೊಂದಿಗೆ ನೆರವೇರಿತು.
ಗುಂಡಿನ ಚೂರು ತೆಲೆಯಲ್ಲಿಟ್ಟುಕೊಂಡೆ ಕರ್ತವ್ಯ ನಿರ್ವಹಿಸಿದ ಧೀರ:
ಕರ್ನಾಟಕ, ಕೇರಳ, ತಮಿಳುನಾಡಿನ ಸರ್ಕಾರಗಳಿಗೆ ತಲೆ ನೋವಾಗಿ ಪರಿಣಮಿಸಿದ್ದ ದಂತಚೋರ ವೀರಪ್ಪನ ವಿಶೇಷ ಕಾರ್ಯಚರಣೆಯಲ್ಲಿ ಸಿದ್ದರಾಜುನಾಯಕ ಭಾಗಿಯಾಗಿದ್ದರು. ಮೈಸೂರು ಎಸ್ಪಿ ಹರಿಕೃಷ್ಣ ಹಾಗೂ ಮಲೆಮಹದೇಶ್ವರ ಬೆಟ್ಟ ಇನ್ಸ್‍ಪೆಕ್ಟರ್ ಶಕಿಲ್ ಅಹಮ್ಮದ್ ಅವರ ತಂಡದೊಡನೆ ತೆರಳುವಾಗ ಹನೂರು ತಾಲ್ಲೂಕಿನ ದಿನ್ನಳ್ಳಿ ಸಮೀಪ ಹೊಂಚು ಹಾಕಿ ಕುಳಿತಿದ್ದ ವೀರಪ್ಪನ್ ಮತ್ತು ಈತನ ತಂಡ ಗುಂಡಿನ ಸುರಿಮಳೆಯನ್ನೆರೆಗಿತು.
ಈ ವೇಳೆ ಎಸ್ಪಿ ಹರಿಕೃಷ್ಣ, ಇನ್ಸ್‍ಪೆಕ್ಟರ್ ಶಕಿಲ್ ಅಹ್ಮದ್ ಸೇರಿದಂತೆ ಏಳು ಮಂದಿ ಪೊಲೀಸರು ಹತರಾದರು. ಈ ವೇಳೆಯೇ ಸಿದ್ದರಾಜುನಾಯಕ ಅವರಿಗೆ 7 ಗುಂಡಿನ ಚೂರುಗಳು ಒಳ ಹೊಕ್ಕಿದ್ದವು. ಈ ಪೈಕಿ ವೈದ್ಯರು 4 ಗುಂಡುಗಳ ಚೂರುಗಳನ್ನು ಹೊರ ತೆಗೆದಿದ್ದರು. ಇನ್ನೂ 3 ಗುಂಡಿನ ಚೂರುಗಳನ್ನು ಹೊರ ತೆಗೆದರೆ ಪ್ರಾಣಕ್ಕೆ ಆಪತ್ತು ಇದೆ ಎಂದು ಹೊರ ತೆಗೆದಿರಲಿಲ್ಲ. ಅದೃಷ್ಟವಶತ್ ಪ್ರಾಣಪಾಯದಿಂದ ಪಾರಾಗಿದ್ದರು.
ಅಭೂತಪೂರ್ವ ಬೀಳ್ಕೊಡುಗೆಗೆ ಸಿದ್ದತೆ ಮಾಡಿಕೊಂಡವರಿಗೆ ನಿರಾಶೆ:
ನರಹಂತಕ ವೀರಪ್ಪನ್ ಕಾರ್ಯಚರಣೆಯಲ್ಲಿ ಪಾಲ್ಗೊಂಡು ಗುಂಡಿನ ಚೂರುಗಳನ್ನು ತಲೆಯಲ್ಲಿ ಇಟ್ಟುಕೊಂಡು ಕರ್ತವ್ಯ ನಿರ್ವಹಿಸಿದ ನಿಷ್ಠಾವಂತ ಪೊಲೀಸ್ ಅಧಿಕಾರಿ ಜೊತೆಗೆ ಪೊಲೀಸರು ಹಾಗೂ ಸಾರ್ವಜನಿಕರ ಜೊತೆಗೆ ಸರಳ ಸಜ್ಜನಿಕೆ, ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದರಾಜು ನಾಯಕ ಅವರು ಇದೇ ತಿಂಗಳ 31 ರಂದು ನಿವೃತ್ತಿ ಹೊಂದುವ ಹಿನ್ನಲೆಯಲ್ಲಿ ಅವರನ್ನು ಅಭೂತಪೂರ್ವವಾಗಿ ಬೀಳ್ಕೊಡುಗೆ
ನೀಡಬೇಕೆಂದು ಪೊಲೀಸರು ನಿರ್ಧರಿಸಿದ್ದರು. ಆದರೆ ವಿಧಿಯಾಟ ಅವರು ಅನಾರೋಗ್ಯದ ನಿಮ್ಮಿತ್ತ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ನೆನ್ನೆ ಹೃದಯಘಾತ ಸಂಭವಿಸಿ ಅಸುನಿಗಿರುವ ಸುದ್ದಿ ಪೊಲೀಸರನ್ನು ದಿಗ್ಭ್ರಾಂತರನ್ನಾಗಿಸಿದೆ. ಮೃತರ ನಿಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಇನ್ನಿತರೆ ಗಣ್ಯರು ಮತ್ತು ಪೊಲೀಸರು ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.