ಸಿದ್ದಗಂಗಾ ಮಾದರಿಯಲ್ಲಿ ಕೆಎಸ್‌ಎನ್ ದಾಸೋಹ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಗುಣಗನ

ದೇವದುರ್ಗ.ಜೂ.೦೪-ತುಮಕೂರಿನ ಶ್ರೀಸಿದ್ಧಂಗಾ ಮಠದ ಮಾದರಿಯಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಕೆಎಸ್‌ಎನ್ ಅನ್ನದಾಸೋಹ ಕೇಂದ್ರದ ಮೂಲಕ ನಿತ್ಯ ೪೦ಸಾವಿರ ಜನರಿಗೆ ಊಟ ವಿತರಣೆ ಮಾಡುತ್ತಿರುವುದು ಎಲ್ಲ ಪಕ್ಷದ ಜನಪ್ರತಿನಿಧಿಗಳಿಗೆ ಮಾಡೆಲ್ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಶಾಸಕ ಗೃಹ ಕಚೇರಿಯಲ್ಲಿ ಆರಂಭಿಸಿರುವ ಕೆಎಸ್‌ಎನ್ ಅನ್ನದಾಸೋಹ ಕೇಂದ್ರಕ್ಕೆ ಭೇಟಿ ನೀಡಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ೪೦ಸಾವಿರ ಜನರಿಗೆ ತಿಂಗಳು ಪರ್ಯಾಂತ ಊಟ ನೀಡುವುದು ಸಾಮಾನ್ಯ ಕೆಲಸವಲ್ಲ. ಕೋವಿಡ್-೧೯ ಸಂಕಷ್ಟ ಸಂದರ್ಭದಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಜನರ ನೆರವಿಗೆ ನಿಂತಿರುವುದು ಮಾದರಿ ಕಾರ್ಯ.
ಅಭಿವೃದ್ಧಿಯೊಂದೇ ಜನಪ್ರತಿನಿಧಿಗಳ ಅಜಂಡ ಆಗಬಾರದು. ಅದರ ಜತೆಗೆ ಸಮಾಜಸೇವೆ, ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಶಿವನಗೌಡ ನಾಯಕ ಈ ಎರಡೂ ಕಾರ್ಯ ಮಾಡುತ್ತಿದ್ದಾರೆ. ಈ ಪುಣ್ಯದ ಕಾರ್ಯದಲ್ಲಿ ಜನರ ಜತೆ ಶಾಸಕರು ನಿಲ್ಲುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಅನ್ನದಾನ ಮಾಡುತ್ತಿದ್ದು, ಇವರ ಪುಣ್ಯದ ಕಾರ್ಯ ಮುಂದಿನ ದಿನಗಳಲ್ಲಿ ಅವರಿಗೆ ಉತ್ತಮ ಭವಿಷ್ಯ ರೂಪಿಸಲಿದೆ.
ಶಿವನಗೌಡ ನಾಯಕ ಜನಪರ ಶಾಸಕನಾಗಿದ್ದು, ಮುಖ್ಯಮಂತ್ರಿ, ಸಚಿವರು ಸೇರಿ ಸರ್ಕಾರದ ಮೇಲೆ ಒತ್ತಡ ಹಾಕಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದಾರೆ. ಪ್ರತಿಹಳ್ಳಿಗೆ ರಸ್ತೆ, ಕುಡಿವ ನೀರು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಈಗ ಕ್ಷೇತ್ರದ ಜನರು ಲಾಕ್‌ಡೌನ್‌ನಿಂದ ಹಸಿವಿನಿಂದ ಬಳಲಬಾರು ಎನ್ನುವ ಕಾರಣಕ್ಕೆ ಅನ್ನ ದಾಸೋಹ ಆರಂಭಿಸಿದ್ದಾರೆ. ಇವರ ಕಾರ್ಯ ನಿರಂತರವಾಗಿ ಮುಂದುವರಿಯಲಿ ಎಂದರು.
ಸಂಸದ ಸಂಗಣ್ಣ ಕರಡಿ, ಶಾಸಕ ಕೆ.ಶಿವನಗೌಡ ನಾಯಕ, ತ್ರಿವಿಕ್ರಮ ಜೋಷಿ, ಎಸಿ ಸಂತೋಷ ಕಾಮೆಗೌಡ, ತಹಸೀಲ್ದಾರ್ ಮಧುರಾಜ್ ಯಾಳಗಿ, ಡಿವೈಎಸ್‌ಪಿ ಎಸ್.ಎಸ್.ಹುಲ್ಲೂರು, ಸಿಪಿಐ ಆರ್.ಎಂ.ನದಾಪ್ ಇದ್ದರು.
ಕಂಟ್ರೋಲ್‌ನಲ್ಲಿದೆ ಕರೊನಾ
ಕರೊನಾ ತಡೆಗೆ ಜಿಲ್ಲಾಡಳಿತ ಕಠಿಣ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಕರೊನಾ ಕಂಟ್ರೋಲ್‌ಗೆ ಬಂದಿದೆ. ಕೆಲ ಜಿಲ್ಲೆಗಳಲ್ಲಿ ಅರ್ಧಲಾಕ್‌ಡೌನ್ ಮಾಡಿದರೆ, ನಮ್ಮಲ್ಲಿ ೩ದಿನ ಸಂಪೂರ್ಣ ಲಾಕ್‌ಡೌನ್ ಮಾಡಿ, ಜಿಲ್ಲಾಡಳಿತದ ನಡೆ ಹಳ್ಳಿಯ ಕಡೆ ಎನ್ನುವ ಅಭಿಯಾನ ಆರಂಭಿಸಲಾಗಿತ್ತು. ಅಲ್ಲದೆ ಒಪೆಕ್, ರಿಮ್ಸ್‌ನಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಆರೈಕೆ ಮಾಡಿದ್ದರಿಂದ ಕರೊನಾ ಶೇ.೧೦ಕ್ಕಿಂತ ಕಡಿಮೆಯಾಗಿದೆ. ಜೂ.೭ರವರೆಗೆ ಲಾಕ್‌ಡೌನ್ ಇರಲಿದೆ. ಬ್ಲಾಕ್ ಫಂಗಲ್‌ಗೆ ಔಷಧ ಕೊರತೆಯಿದ್ದು, ಕೇಂದ್ರ ಸಚಿವರಾದ ಸದಾನಂದಗೌಡ, ಪ್ರಲ್ಹಾದ್ ಜೋಷಿಯೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಔಷಧ ಪಡೆಯಲಾಗುತ್ತಿದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.
ಈಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ಕೆ.ಶಿವನಗೌಡ ನಾಯಕ, ತ್ರಿವಿಕ್ರಮ ಜೋಷಿ ಸೇರಿದಂತೆ ಇತರರು ಇದ್ದರು.