ಸಿದ್ದಗಂಗಾ ಮಠದ ವಸತಿ ನಿಲಯ ಟೆಂಡರ್ ಮುಂದುವರಿಕೆಗೆ ಸಿಎಂ ಸೂಚನೆ

ಬೆಂಗಳೂರು, ಮೇ 31- ತುಮಕೂರು ಸಿದ್ದಗಂಗಾ ಮಠದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಸತಿ ನಿಲಯ ಕಟ್ಟಡ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಂದುವರೆಸಲು ಲೋಕೋಪಯೋಗಿ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕಾಮಗಾರಿ ಟೆಂಡರ್ ಪ್ರಕ್ರಿಯೆಯನ್ನು ಮುಂದುವರೆಸುವ ಬಗ್ಗೆ ಇಲಾಖೆಯು ಸಲ್ಲಿಸಿದ ಮನವಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮುಂದುವರೆಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ ಇನ್ನೂ ಪ್ರಾರಂಭ ವಾಗದಿರುವ ಕಾಮಗಾರಿಗಳನ್ನು ಮರುಪರಿಶೀಲನೆಗಾಗಿ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು. ಅದರಲ್ಲಿ 9.90 ಕೋಟಿ ರೂ. ವೆಚ್ಚದ ಸಿದ್ದಗಂಗಾ ಮಠದ ವಸತಿ ನಿಲಯದ ಕಾಮಗಾರಿಯೂ ಸೇರಿತ್ತು. ಈ ಕಾಮಗಾರಿಯ ತಾಂತ್ರಿಕ ಬಿಡ್ ತೆರೆಯಲಾಗಿತ್ತು.